

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಭಾವದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾರಿ ಹಿನ್ನಡೆ ಕಂಡು ಬಂದಿದ್ದು ಬರದ ವಾತಾವರಣ ನಿರ್ಮಾಣವಾಗಿದೆ.
ಪ್ರಸಕ್ತ ಸಾಲಿಗೆ 1,48,592 ಹೆ.ಪ್ರದೇಶದ ಗುರಿ ಪೈಕಿ 78,818 ಹೆ.ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲೂ ಬಹುತೇಕ ಕಡೆ ತೇವಾಂಶ ಕುಸಿತ ಮತ್ತು ಉಷ್ಣಾಂಶ ಹೆಚ್ಚಳಕ್ಕೆ ಬೆಳೆಗಳು ಒಣಗಿ ಹೋಗುತ್ತಿವೆ. ಜಿಲ್ಲೆಯ ಗ್ರಾಮಗಳಲ್ಲಿ ನಿಧಾನವಾಗಿ ಕುಡಿಯುವ ನೀರಿನ ಹಾಹಾಕಾರ ಸಮಸ್ಯೆ ಉದ್ಭವವಾಗುತ್ತಿದೆ. ಮುಂಬರುವ ದಿನಗಳಲ್ಲಿ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ರಾಜ್ಯ ಸರ್ಕಾರವು ಮಳೆಯ ಅಭಾವಕ್ಕೆ ನಲುಗುತ್ತಿರುವ ತಾಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಿ, ಬರಪೀಡಿತ ಪ್ರದೇಶಗಳೆಂಬುದಾಗಿ ಘೋಷಿಸಲು ಸರ್ವೆ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಸೂಚಿಸಿದೆ. ಅದರಂತೆ 100 ಕ್ಕೂ ಹೆಚ್ಚು ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗುತ್ತವೆ ಎಂಬುದು ಪ್ರಾಥಮಿಕ ಲೆಕ್ಕಾಚಾರದಲ್ಲಿ ತಿಳಿದು ಬಂದಿದೆ. ಈ ಪೈಕಿ ಜಿಲ್ಲೆಯ 6 ತಾಲೂಕುಗಳಲ್ಲೂ ಸಮಸ್ಯಾತ್ಮಕ ಸ್ಥಿತಿ ಇದೆ.
*ಮಳೆಯ ಅಭಾವ
ಕಳೆದ ಜೂನ್‌ನ 64.1 ವಾಡಿಕೆ ಮಳೆಗೆ 53.4 ಮಿ.ಮೀ ಮಳೆ, ಜುಲೈನಲ್ಲಿ 85.5 ವಾಡಿಕೆ ಮಳೆಗೆ 68.8 ಮಿ.ಮೀ, ಆಗಸ್ಟಲ್ಲಿ 73.7 ಮಿ.ಮೀ ವಾಡಿಕೆ ಮಳೆಗೆ ಕೇವಲ 13.7 ಮಿ.ಮೀ ಮಳೆಯಾಗಿದೆ. ಮುಂಗಾರು ಅವಧಿಗೆ ಇಲ್ಲಿಯವರೆಗೂ 331.4 ಮಿ.ಮೀ ವಾಡಿಕೆ ಮಳೆಯ ನಿರೀಕ್ಷೆ ಇತ್ತು. ಇದಕ್ಕೆ 279 ಮಿ.ಮೀ ಮಾತ್ರ ಬಿದ್ದಿದೆ. ಕಳೆದ ಮುಂಗಾರಿನಲ್ಲಿ ವಾರ್ಷಿಕ ವಾಡಿಕೆ ಮಳೆ 721 ಮಿ.ಮೀ ಪೈಕಿ 896 ಮಿ.ಮೀ ಮಳೆ ಸುರಿಯುವುದರೊಂದಿಗೆ ಅತಿವೃಷ್ಟಿ ಉಂಟಾಗಿತ್ತು. ಈ ಬಾರಿ ಅನವೃಷ್ಟಿ ಸಮಸ್ಯೆ ಕಾಡುತ್ತಿದೆ.
*ಬಿತ್ತನೆ ಕುಂಠಿತ, ಹಾಳಾಗುವಿಕೆ ಸಮಸ್ಯೆ
ಜಿಲ್ಲೆಯಲ್ಲಿ ಮಳೆಯ ಅಭಾವ ತೀವ್ರ ಉಂಟಾಗಿದೆ. ನೆಲಗಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ಹಿನ್ನಡೆ ಕಂಡು ಬಂದಿದೆ. ಇನ್ನು ಆಗಸ್ಟ್ ನಲ್ಲಿ ಮಳೆಯ ನಿರೀಕ್ಷೆಯಲ್ಲಿ ರಾಗಿ, ಮುಸುಕಿನ ಜೋಳ ಬೆಳೆ ಉಳಿಸಿಕೊಳ್ಳುವ ಲೆಕ್ಕಾಚಾರವು ಉಲ್ಟಾ ಪಲ್ಟಾ ಆಗಿದೆ. ಬಹುತೇಕ ಬೆಳೆಗಳು ಒಣಗಿ ಹೋಗುತ್ತಿವೆ. ಹಲವೆಡೆ ಅನಿವಾರ್ಯವಾಗಿ ಎರಡೆರಡು ಬಾರಿ ಬಿತ್ತನೆ ಕೈಗೊಳ್ಳಲಾಗಿದೆ. ಮತ್ತೊಂದೆಡೆ ನೀರಾವರಿ ಪ್ರದೇಶದಲ್ಲಿ ಹೂವು, ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತಿದೆ.
*ಹಾಹಾಕಾರ ಸಮಸ್ಯೆ ಬಿಸಿ
ಮುಂಗಾರು ಅವಧಿಯಲ್ಲಿ ನಿರಂತರವಾಗಿ ಉಷ್ಣಾಂಶ ಹೆಚ್ಚಳವಾಗಿರುವುದರ ನಡುವೆ ಕುಡಿಯುವ ನೀರು, ಮೇವಿನ ಸಮಸ್ಯೆಯ ಬಿಸಿ ತಟ್ಟುತ್ತಿದೆ. ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು 45 ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಪ್ರಸ್ತುತ ತಾತ್ಕಾಲಿಕ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇದಕ್ಕೆ ಸಂಬಂಽಸಿದಂತೆ ಎರಡ್ಮೂರು ದಿನಗಳಿಗೊಮ್ಮೆ ಎನ್ನುವಂತಾಗಿದ್ದು ಇದರಲ್ಲಿ ದಿನಗಳ ಅಂತರವು ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಈಗ ಮೇವಿನ ಸಮಸ್ಯೆ ಇಲ್ಲ. ಆದರೆ, ಮುಂಬರುವ ದಿನಗಳಲ್ಲಿ ಅಭಾವ ಸೃಷ್ಟಿಯಾಗಲಿದೆ.
* ಜಿಲ್ಲೆಗೆ ಬರ ಹೊಸದೇನಲ್ಲ. ಕಳೆದ ೧೦ ವರ್ಷಗಳಲ್ಲಿ ಹೆಚ್ಚಿಗೆ ಭೀಕರ ಪರಿಸ್ಥಿತಿಯನ್ನು ಕಂಡಿದೆ. ಈ ಬಾರಿ ತ್ವರಿತವಾಗಿ ಸಮಸ್ಯೆಯನ್ನು ಗುರುತಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಅಧಿಕೃತವಾಗಿ ಬರಪೀಡಿತ ಪ್ರದೇಶ ಎಂಬುದಾಗಿ ಸರ್ಕಾರದಿಂದ ಘೋಷಣೆಯಾಗಬೇಕಾಗಿದೆ.
ಮುನಿಕೃಷ್ಣಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ