

ಮಡಿಕೇರಿ:
ರಾಜ್ಯಕ್ಕೆ ನೀರು ಕೊಡುವ ಜೀವನದಿ ಕಾವೇರಿಯ ತವರು ಕೊಡಗು ಕೂಡ ಸರ್ಕಾರದ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಜಿಲ್ಲೆಯ ೩ ತಾಲೂಕುಗಳು ೨೦೨೩ರ ಮುಂಗಾರಿನಲ್ಲಿ ತೀವ್ರ ಬರಪೀಡಿತ ತಾಲೂಕು ಎಂದು ಗುರುತಿಸಿದ್ದರೆ, ೧ ತಾಲೂಕು ಸಾಧಾರಣ ಬರಪೀಡಿತ ತಾಲೂಕಾಗಿ ಸೇರಿಕೊಂಡಿದೆ. ಉಳಿದ ಇನ್ನೊಂದು ತಾಲೂಕು ಕೂಡ ಮುಂದಿನ ಹಂತದಲ್ಲಿ ಬರಪೀಡಿತ ಎನ್ನುವ ಹಣೆ ಪಟ್ಟಿ ಕಟ್ಟಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ೨೦೧೮ರಿಂದ ಈಚೆಗೆ ಅತಿವೃಷ್ಟಿಯಿಂದ ತತ್ತರಿಸಿದ್ದ ಕೊಡಗು ಈ ವರ್ಷ ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿರುವುದು ಚಿಂತಿಸುವಂತೆ ಮಾಡಿದೆ.
ಈ ಮೊದಲು ಕೊಡಗಿನ ಕೆಲವು ಪ್ರದೇಶಗಳನ್ನು ಬರಪೀಡಿತ ಎಂದು ಗುರುತಿಸಿದ್ದು ಹೊರತು ಪಡಿಸಿದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ತೀವ್ರ ಬರಪೀಡಿತ ೧೬೧ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ವಿರಾಜಪೇಟೆ ತಾಲೂಕುಗಳು ಸ್ಥಾನ ಪಡೆದುಕೊಂಡಿದೆ. ಸಾಧಾರಣ ಬರಪೀಡಿತ ೩೪ ತಾಲೂಕುಗಳ ಪಟ್ಟಿಯಲ್ಲಿ ಸೋಮವಾರಪೇಟೆ ತಾಲೂಕು ಇದೆ. ಪರಿಸ್ಥಿತಿ ನೋಡಿಕೊಂಡು ಬರಪೀಡಿತ ತಾಲೂಕುಗಳ ಇನ್ನೂ ಒಂದು ಪಟ್ಟಿ ಸಿದ್ದವಾಗಲಿದ್ದು, ಪೊನ್ನಂಪೇಟೆ ತಾಲೂಕು ಕೂಡ ಈ ಪಟ್ಟಿಗೆ ಸೇರ್ಪಡೆ ಆಗುವ ಸಾಧ್ಯತೆಯಿದೆ.
ಮಳೆಯ ಕೊರತೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಇತರ ಮಾನದಂಡಗಳ ಆಧಾರದ ಮೇಲೆ ತೀವ್ರ ಮತ್ತು ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ. ಸೆ.೧೩ರಿಂದಲೇ ಜಾರಿಗೆ ಬರುವಂತೆ ಮುಂದಿನ ೬ ತಿಂಗಳ ಅವಧಿ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಈ ಘೋಷಣೆ ಜಾರಿಯಲ್ಲಿರಲಿದೆ. ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರದಿಂದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಗಳನ್ವಯ ನೀಡಲಾಗುವ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪಾಲಿಸಬೇಕಾಗುತ್ತದೆ.
ಬರಪೀಡಿತ ತಾಲೂಕು ಘೋಷಣೆ ಬೆನ್ನಲ್ಲೇ ನರೇಗಾ ಉದ್ಯೋಗವನ್ನು ೧೦೦ ದಿನದಿಂದ ೧೫೦ ದಿನಗಳಿಗೆ ಏರಿಕೆ, ಬರಪೀಡಿತ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು, ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಕೊಡಗಿನಲ್ಲಿ ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಜಿಲ್ಲೆಯಲ್ಲಿ ಕೃಷಿಗೆ ತೀವ್ರ ಹಿನ್ನಡೆ ಆಗಿದೆ. ಈ ಬಾರಿ ಭತ್ತ ಬೆಳೆಯುವ ಪ್ರದೇಶದಲ್ಲಿ ತೀವ್ರ ಕುಸಿತ ಬಂದಿದ್ದು, ಶೇ ೩೫ರಷ್ಟು ಪ್ರಮಾಣದಲ್ಲಿ ಮಾತ್ರ ನಾಟಿ ಕಾರ್ಯ ನಡೆದಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಹುತೇಕ ಮಳೆಯಾಶ್ರಿತ ಪ್ರದೇಶಗಳನ್ನು ಹೊಂದಿರುವ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೧,೬೦೦ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ನಾಟಿಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ೯,೭೯೩ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆದಿದೆ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲೂ ಸಾಮಾನ್ಯದಷ್ಟು ಪ್ರಮಾಣದಲ್ಲಿ ನಾಟಿ ಕಾರ್ಯ ನಡೆದಿಲ್ಲ.
ಈ ವರ್ಷ ಮತ್ತೊಂದಿಷ್ಟು ಕೃಷಿಕರು ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಪಾಳು ಬಿಡಲಾಗುವ ಪ್ರದೇಶದ ವಿಸ್ತೀರ್ಣ ಇನ್ನೂ ಹೆಚ್ಚಾಗಿದೆ. ಪ್ರತಿ ವರ್ಷವೂ ಕೃಷಿ ಕಾರ್ಮಿಕರ ಕೊರತೆ, ಏರುತ್ತಿರುವ ಕೃಷಿ ವೆಚ್ಚ, ಸರಿಯಾದ ಬೆಲೆ ಸಿಗದಿರುವುದು ಮತ್ತಿತರ ಕಾರಣಗಳಿಂದ ರೈತರು ಭತ್ತ ಬೆಳೆಯುವುದಕ್ಕೆ ಹಿಂಜರಿಯುತ್ತಿದ್ದರೆ, ಈ ವರ್ಷ ಮಳೆಯ ಕೊರತೆ ರೈತರನ್ನು ಭತ್ತ ಬೆಳೆಯದಂತೆ ಮಾಡಿದೆ. ಕೊಡಗಿನ ಆರ್ಥಿಕ ಪರಿಸ್ಥಿತಿ ನಿರ್ಧರಿಸುವ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳ ಮೇಲೂ ಮಳೆಯ ಅಭಾವ ಪರಿಣಾಮ ಬೀರಲಿದೆ ಎನ್ನುತ್ತಾರೆ ಅನುಭವಿ ಕೃಷಿಕರು.
ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಕೃಷಿ ಜಮೀನಿಗೆ ನೀರೊದಗಿಸುವ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಮೇಲೂ ಮಳೆಯ ಕೊರತೆ ಪರಿಣಾಮ ಬೀರಿದೆ. ವರ್ಷಂಪ್ರತಿ ರೈತರ ಜಮೀನಿಗೆ ಯಥೇಚ್ಛವಾಗಿ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಕಟ್ಟು ಪದ್ಧತಿ ಅನುಸರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ೧೫ ದಿನಗಳಿಗೊಮ್ಮೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದಲ್ಲಿ ಇರುವ ರೈತರಿಗೆ ಸಮಸ್ಯೆ ಆಗುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಹಾಗಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಭತ್ತದ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿಯುವ ಆತಂಕವೂ ಕಂಡುಬಂದಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ತೀವ್ರವಾಗಿ ಕುಸಿದಿದೆ. ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ಮಳೆ ೫.೭೬ ಮಿ.ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೮.೦೩ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಮಳೆ ೧೮೨೯.೧೬ ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೩೧೨೪.೮೨ ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ವರ್ಷ ೨೭೦೨.೭೩ ಮಿ.ಮೀ. ಮಳೆಯಾಗಿದ್ದರೆ. ಕಳೆದ ವರ್ಷ ಇದೇ ಅವಧಿಯಲ್ಲಿ ೪೫೨೧.೭೫ ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಈ ವರ್ಷ ೧೩೮೨.೭೮ ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ ೨೪೨೪.೬೯ ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ವರ್ಷ ೧೪೦೧.೯೮ ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೨೪೨೮.೦೩ ಮಿ.ಮೀ. ಮಳೆ ಬಂದಿತ್ತು.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯ ಜಲಾಶಯದಲ್ಲಿ ಸದ್ಯಕ್ಕೆ ಭರ್ತಿ ನೀರಿದೆ. ಅಣೆಕಟ್ಟೆಯ ಎತ್ತರ ೨೮೫೯ ಅಡಿಗಳು. ಗುರುವಾರದ ಮಾಹಿತಿ ಪ್ರಕಾರ ನೀರಿನ ಮಟ್ಟ ೨೮೫೮.೩೮ ಅಡಿಗಳು. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ೮.೨೯೦ ಟಿಎಂಸಿಗಳನ್ನು ನೀರಿನ ಸಂಗ್ರಹವಿದ್ದು ಇದರಲ್ಲಿ ೭.೫೩೯ ಟಿಎಂಸಿಗಳಷ್ಟು ಬಳಕೆಯೋಗ್ಯ ನೀರಿದೆ. ಈ ವರ್ಷ ಜಲಾಶಯಕ್ಕೆ ಒಟ್ಟು ೨೦.೬೭೭ ಟಿಎಂಸಿ ನೀರು ಹರಿದು ಬಂದಿದ್ದು, ೧೩.೩೪೬ ಟಿಎಂಸಿ ನೀರು ಹೊರಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೮೫೮.೦೨ ಅಡಿಗಳಷ್ಟು ನೀರಿತ್ತು. ೭.೪೧೭ ಟಿಎಂಸಿಗಳಷ್ಟು ಬಳಕೆ ಯೋಗ್ಯ ನೀರಿನ ಸಂಗ್ರಹ ಇತ್ತು. ಪ್ರಸ್ತುತ ೧೩೦೨ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ ೪೩೩ ಕ್ಯುಸೆಕ್ ಮತ್ತು ಕಾಲುವೆಗೆ ೧೩೮೫ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ೨೪೭೭ ಕ್ಯೂಸೆಕ್ ಒಳಹರಿವು ಇತ್ತು. ನದಿಗೆ ೭೫೦ ಮತ್ತು ಕಾಲುವೆಗೆ ೯೫೦ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೊಡಗಿನ ಕೆಲವು ಭಾಗಗಳನ್ನು ಬರ ಪೀಡಿತ ಎಂದು ಘೋಷಿಸಿದ್ದ ನೆನಪು ಇದೆ. ಅದು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಒಂದು ತಾಲೂಕು ಹೊರತುಪಡಿಸಿ ಉಳಿದ ನಾಲ್ಕೂ ತಾಲೂಕುಗಳನ್ನು ಬರಪೀಡಿತ ಎಂದು ಪಟ್ಟಿಗೆ ಸೇರಿಸಿರುವುದು ಇದೇ ಮೊದಲು. ಆ ದಿನಗಳಲ್ಲಿ ಈಗಿನ ಕುಶಾಲನಗರ ತಾಲೂಕಿನ ಕೆಲವು ಗ್ರಾಮಗಳನ್ನು ಬರಪೀಡಿತ ಎಂದು ಗುರುತಿಸಿ ಸಾಲ ಮನ್ನಾ, ಕಂದಾಯ ಮನ್ನಾದಂತಹ ಅನುಕೂಲ ಒದಗಿಸಲಾಗಿತ್ತು. ಆಗಷ್ಟೇ ಹಾರಂಗಿ ಜಲಾಶಯ ಕಾರ್ಯಾರಂಭ ಮಾಡಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಸೌಲಭ್ಯ ಸಿಕ್ಕಿರಲಿಲ್ಲ.
ಭಾರದ್ವಾಜ್ ಕೆ. ಆನಂದತೀರ್ಥ, ಸಾಹಿತಿ, ಕಣಿವೆ