

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಇನ್ನೆರಡು ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸುವ ಸಂಬಂಧ ಬೆಳೆ ಪರಿಸ್ಥಿತಿ ಅಧ್ಯಯನಕ್ಕೆ ಸರ್ಕಾರವು ಜಿಲ್ಲಾಧಿಕಾರಿಗೆ ಸೂಚಿಸಿದೆ.
ಸಿದ್ದಾಪುರ ಹಾಗೂ ದಾಂಡೇಲಿ ತಾಲೂಕುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ತಾಲೂಕುಗಳ ಒಟ್ಟಾರೆ ಕಂದಾಯ ಗ್ರಾಮಗಳ ಪೈಕಿ ಶೇ. ರಷ್ಟು 10 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಪ್ರಮುಖ 5 ಬೆಳೆಗಳನ್ನು ಗುರುತಿಸಬೇಕು. ನಂತರ ಇ ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ಸರ್ವೇ ಮಾಡಬೇಕು. ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ಜಂಟಿ ತಂಡವನ್ನು ಜಿಲ್ಲಾಧಿಕಾರಿ ರಚಿಸಿ ಈ ಸಮೀಕ್ಷೆಗೆ ವ್ಯವಸ್ಥೆ ಮಾಡಬೇಕು. ಅಕ್ಟೋಬರ್ 11 ರಂದು ಜಿಲ್ಲಾಧಿಕಾರಿಗಳು ಸಮೀಕ್ಷೆಯ ವರದಿಯನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸರ್ಕಾರದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಗ್ರಾಮೀಣ ಘಟಕದ ಕಾರ್ಯದರ್ಶಿ ಅಪಘಾತದಲ್ಲಿ ಸಾವು
ಅಲ್ಲದೆ, ಕಾರವಾರ ತಾಲೂಕನ್ನು ಈ ಹಿಂದೆ ಸಾಧಾರಣ ಬರ ಪೀಡಿತ ಎಂದು ಘೋಷಿಸಲಾಗಿತ್ತು. ಇಲ್ಲಿನ ಬೆಳೆ ಸಮೀಕ್ಷೆಯ ವರದಿಯಲ್ಲಿ ಗೊಂದಲವಿದ್ದು, ಮರು ಸಮೀಕ್ಷೆ ಮಾಡುವಂತೆ ಆದೇಶಿಸಿದ್ದಾರೆ.
ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಶಿರಸಿ, ಯಲ್ಲಾಪುರ ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಹಾಗೂ ಅಂಕೋಲಾ, ಭಟ್ಕಳ, ಕಾರವಾರ, ಕುಮಟಾ, ಜೊಯಿಡಾ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಸೆ. 9 ರಂದು ಸರ್ಕಾರ ಘೋಷಿಸಿತ್ತು. ಜಿಲ್ಲೆಯ 12 ತಾಲೂಕುಗಳ ಪೈಕಿ 9 ತಾಲೂಕುಗಳು ಬರ ಪೀಡಿತ ಪಟ್ಟಿಗೆ ಈಗಾಗಲೇ ಸೇರ್ಪಡೆಯಾಗಿದ್ದು, ಇನ್ನೆರಡು ತಾಲೂಕುಗಳು ಸೇರುವ ಸಾಧ್ಯತೆ ಇದೆ. ಹೊನ್ನಾವರ ತಾಲೂಕು ಮಾತ್ರ ಈ ಪಟ್ಟಿಯಿಂದ ಹೊರಗಿರಲಿದೆ.