

ಮೈಸೂರು: ದಸರಾ ಮಹೋತ್ಸವಕ್ಕೆ ಹೊಸ ಮೆರುಗು ನೀಡಿದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ, ಬಾನಂಗಳದಲ್ಲಿ ಬಣ್ಣ, ಬಣ್ಣದ ವಿವಿಧ ಕಲಾಕೃತಿಗಳ ಚಿತ್ತಾರಗಳ ಮನಮೋಹಕವಾಗಿತ್ತು. ಒಟ್ಟು 3 ಸಾವಿರ ಡ್ರೋನ್‌ಗಳು ಚಿತ್ರಗಳ ಹೊಸ ಲೋಕವನ್ನು ಸೃಷ್ಟಿಸಿದವು.
ಏಕಕಾಲದಲ್ಲಿ ಸಭಾಂಗಣದ ಉತ್ತರ ಭಾಗದಿಂದ ಬಂದ ಡ್ರೋನ್‌ಗಳು ಬಣ್ಣ, ಬಣ್ಣದ ಚಿತ್ತಾರ ಮೂಡಿಸುವ ಮೂಲಕ ನೋಡುಗರ ಮನಸೂರೆಗೊಂಡಿತು.
ಏಕಕಾಲದಲ್ಲಿ ಬಾನೆತ್ತರಕ್ಕೆ ಹಾರಿದ ಡ್ರೋನ್‌ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದ್ದರೆ ಜನರು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.
ಆರಂಭಕ್ಕೆ ಸೌರಮಂಡಲ, ವಿಶ್ವಭೂಪಟ, ದೇಶ ಕಾಯುವ ಹೆಮ್ಮೆಯ ಸೈನಿಕ, ರಾಷ್ಟ್ರೀಯ ಪಕ್ಷ ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಗರುಡ (ಈಗಲ್), ಕಳಿಂಗ ಮರ್ಧನ ಮಾಡುವ ಶ್ರೀಕೃಷ್ಣ ನೃತ್ಯ, ಕಾವೇರಿ ಮಾತೆ, ಪಂಚ ಗ್ಯಾರಂಟಿಗಳನ್ನು ಬಿಂಬಿಸುವ ಕರ್ನಾಟಕ ಭೂಪಟದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರಗಳು ಬಂದಾಗ ಜನರು ಚಪ್ಪಾಳೆಯ ಮೆಚ್ಚುಗೆ ಸೂಚಿಸಿದರು.
ಪ್ರದರ್ಶನಕ್ಕೂ ಮುನ್ನಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಡ್ರೋನ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಶಾಸಕ ತನ್ವೀರ್‌ಸೇಠ್, ಎಂಎಲ್‌ಸಿ ಕೆ. ಶಿವಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ತಾಂತ್ರಿಕ ವಿಭಾಗದ ನಿರ್ದೇಶಕ ಡಿ.ಜೆ. ದಿವಾಕರ್, ನಗರಪಾಲಿಕೆ ಆಯುಕ್ತ ಶೇಖ್‌ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್, ಎಸ್‌ಪಿ ವಿಷ್ಣುವರ್ಧನ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ರಾಘವೇಂದ್ರ ಇತರರು ಇದ್ದರು.