

ಕೃಷಿಯಲ್ಲಿ ಡ್ರೋಣ್ ಬಳಕೆ ಕುರಿತು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್(ಇಫ್ಕೋ), ಕೃಷಿ ಇಲಾಖೆ ವತಿಯಿಂದ ನಗರದ ಅಗ್ನಿ ಏರೋಸ್ಪೇಸ್ ಸಭಾಂಗಣದಲ್ಲಿ ಇಫ್ಕೋ ಅಧ್ಯಕ್ಷ ದಿಲೀಪ್ ಸಿಂಘಾನಿ ಚಾಲನೆ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್ ಸಾಥ್ ನೀಡಿದರು.
ಕೃಷಿಯಲ್ಲಿ ಡ್ರೋಣ್ ಅಳವಡಿಕೆಯಿಂದ ಅನೇಕ ಲಾಭಗಳಿದ್ದು, ಕಡಿಮೆ ಸಮಯದಲ್ಲಿ ಮತ್ತು ಅಧಿಕ ದಕ್ಷತೆಯಿಂದ ಕೃಷಿ ಕಾರ್ಯಗಳನ್ನು ಮಾಡಬಹುದಾಗಿದೆ. ಇದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಬಗೆಹರಿಯಲಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಪರಿಚಯಿಸಲು ಸದಾ ಮುಂಚೂಣಿಯಲ್ಲಿರುವ ಇಫ್ಕೋ ಸಂಸ್ಥೆಯು ಇದೀಗ ಡ್ರೋಣ್ ತಂತ್ರಜ್ಞಾನವನ್ನು ರೈತರ ಜಮೀನಿಗೆ ತಲುಪಿಸಲು ಮುಂದಾಗಿದೆ. ಈ ಸಂಬಂಧ ದೇಶಾದ್ಯಂತ 2500 ಡ್ರೋಣ್‌ಗಳನ್ನು ಪರಿಚಯಿಸುತ್ತಿದ್ದು, ಇದನ್ನು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶವಾಗಿ ಪರಿವರ್ತಿಸುತ್ತಿದೆ.
ಇದರಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದರ ಭಾಗವಾಗಿ ರಾಜ್ಯದಲ್ಲೂ 500 ಗ್ರಾಮೀಣ ನಿರುದ್ಯೋಗಿ ಯುವಕರಿಗೆ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಇದರ ಮೊದಲ ಹಂತವಾಗಿ ಮೈಸೂರಿನಲ್ಲಿ ಪ್ರಥಮ ತಂಡದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಶಿಬಿರದಲ್ಲಿ 50 ಜನ ಭಾಗಿಯಾಗಿದ್ದು, ನಾಲ್ಕು ದಿನಗಳು ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಡ್ರೋಣ್ ಬಳಕೆ, ಜಮೀನಿನಲ್ಲಿ ರಸಗೊಬ್ಬರ ಸಿಂಪಡಣೆ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗುವುದು.
ಇಫ್ಕೋ ಅಧ್ಯಕ್ಷ ದಿಲೀಪ್ ಸಿಂಘಾನಿ ಮಾತನಾಡಿ, ಇಫ್ಕೋ ಇಡೀ ಪ್ರಪಂಚದಲ್ಲೇ ರೈತರ ಒಡೆತನದ ದೊಡ್ಡ ಸಂಸ್ಥೆಯಾಗಿದೆ. ಸಂಸ್ಥೆಯು ಲಾಭದ ಶೇ.50 ಅನ್ನು ಇಂತಹ ಕಾರ್ಯಕ್ರಮಕ್ಕೆ ಖರ್ಚು ಮಾಡಲಾಗುತ್ತಿದೆ. ರೈತರು ಕಡಿಮೆ ದರದಲ್ಲಿ ಅತ್ಯಂತ ಪರಿಣಾಮಕಾರಿಯಾದ ಇಫ್ಕೋ ಸಂಸ್ಥೆಯ ನ್ಯಾನೊ ಯೂರಿಯಾ, ಡಿಎಪಿ ಗೊಬ್ಬರವನ್ನು ಬಳಸಿ ಅಧಿಕ ಲಾಭ ಪಡೆಯಬಹುದಾಗಿದೆ.
ದುಬಾರಿ ರಸಗೊಬ್ಬರಗಳನ್ನು ರೈತರಿಗೆ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲು ಸರ್ಕಾರ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡುತ್ತಾ ಬಂದಿದೆ. ಅವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಅಸಮತೋಲಿತ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವುದು ಕಳವಳದ ಸಂಗತಿಯಾಗಿದೆ. ಸಂಸ್ಥೆಯ ಈ ಒಂದು ಯೋಜನೆಯಿಂದ ಗ್ರಾಮೀಣ ಭಾಗದಲ್ಲಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ ಎಂದು ಹೇಳಿದರು.
ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು, ಬೆಳೆ ಇಳುವರಿ ಕುಂಠಿತವಾಗುತ್ತಿದೆ. ಒಂದು ಬಾಟಲ್ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ- ಒಂದು ಚೀಲ ಯೂರಿಯಾ ಮತ್ತು ಡಿಎಪಿಗೆ ಸಮವಾಗಿದೆ. ನ್ಯಾನೋ ಯೂರಿಯಾ ಬಳಕೆಯಿಂದ ಗಾಳಿ ಹಾಗೂ ನೀರಿನ ಪ್ರದೂಷಣೆಯನ್ನು ತಡೆಗಟ್ಟಿ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ. ಅಲ್ಲದೆ ಸರ್ಕಾರದ ಮೇಲೆ ಬೀಳುವ ಆರ್ಥಿಕ ಹೊರೆ ಕಡಿಮೆ ಮಾಡಲಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ, ಇಫ್ಕೋ ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಬೇಕು. ಡ್ರೋಣ್ ತರಬೇತಿ ಕಾರ್ಯಕ್ರಮ ದೇಶದ ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.
ಇಫ್ಕೋ ಸಂಸ್ಥೆಯ ಸಾವಿತ್ರಿ ಸಿಂಗ್, ಡಾ.ಪಿ.ನಾರಾಯಣಸ್ವಾಮಿ ಇತರರಿದ್ದರು.