

ಗುಂಡ್ಲುಪೇಟೆ: ಡ್ರೋನ್ ಸರ್ವೇಯಿಂದ ಆಸ್ತಿಯ ಖಚಿತ ಮಾಪನ ಮಾಡಲು ಸಾಧ್ಯವಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ಭೂಮಾಪನಾ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಆಸ್ತಿಗಳ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಅಲ್ಲದೆ ಇಷ್ಟು ದಿನಗಳವರೆಗೆ ಇದ್ದ ಬಹುತೇಕ ಭೂವಿವಾದಗಳು ನಿವಾರಣೆಯಾಗಲಿವೆ ಎಂದು ತಿಳಿಸಿದರು.
ಈ ಸರ್ವೇಯಲ್ಲಿ ಗ್ರಾಮ ಠಾಣೆಯನ್ನು ಆಧರಿಸಿ ಆಸ್ತಿಗಳನ್ನು ನಿಖರವಾಗಿ ಮಾಪನ ಮಾಡಲಾಗುತ್ತದೆ. ಸರ್ವೇ ನಂತರ ಮಾಲೀಕರಿಗೆ ಆಸ್ತಿಗೆ ಸಂಬಂಧಿಸಿದ ಕಾರ್ಡ್ ನೀಡಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳ ಮೌಲ್ಯ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಆಸ್ತಿಯನ್ನು ಹೊಂದಿರುವವರು ಬ್ಯಾಂಕ್‌ನಿಂದ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಆದ್ದರಿಂದ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಅಧಿಕಾರಿಗಳು ಆಸ್ತಿಗಳ ಸರ್ವೇ ಮಾಡಲು ಬಂದಾಗ ಅವರಿಗೆ ಸಾರ್ವಜನಿಕರು ಸಹಕರಿಸುವುದರಿಂದ ತಮ್ಮ ಆಸ್ತಿಗಳ ಹಾಗೂ ನಿವೇಶನಗಳ ನಿಖರವಾದ ದಾಖಲೆಗಳನ್ನು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಭೂಮಾಪನಾ ಇಲಾಖೆ ಉಪನಿರ್ದೇಶಕಿ ವಿದ್ಯಾಯಿನಿ, ಸಹಾಯಕ ನಿರ್ದೇಶಕ ಮಹೇಶ್, ಮೇಲ್ವಿಚಾರಕ ಟಿ.ಎನ್.ಮಹೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಷಣ್ಮುಗ, ತೆರಕಣಾಂಬಿ ನಾಡಕಚೇರಿ ಕಂದಾಯ ಅಧಿಕಾರಿ ನಾಗೇಂದ್ರ, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಎಪಿಎಂಸಿ ನಿರ್ದೇಶಕ ಮೃತ್ಯುಂಜಯಪ್ಪ, ಮುಖಂಡ ಪ್ರಭುಸ್ವಾಮಿ ಇತರರು ಇದ್ದರು.