

ಬೆಂಗಳೂರು: ಡ್ರೋನ್ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್ ಪ್ರತಾಪ್ ಇಂದು ತೀವ್ರ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಪ್ರತಾಪ್ ವಿರುದ್ಧ ದೂರು ದಾಖಲಾಗಿ, ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದರ ನಡುವೆ ಟ್ವಿಟರ್ನಲ್ಲಿ ಸಕ್ರೀಯರಾಗಿರುವ ಪ್ರತಾಪ್, ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವ ಮೂಲಕ ಹಾಗೂ ತಮ್ಮ ಸಾಧನೆಗಳನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ಸಾರ್ವಜನಿಕ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ತನ್ನನ್ನು ತೆಗಳುತ್ತಿರುವ ಜನರಿಗೆ ನಿನ್ನೆ ಪ್ರತಾಪ್ ಸವಾಲೊಂದನ್ನು ಎಸೆದಿದ್ದಾರೆ. ಇಂದು ಅನೇಕ ಜನರು ನನ್ನನ್ನು ನಕಲಿ ಎಂದು ಕರೆಯುತ್ತಿದ್ದಾರೆ. ನಾನಿಂದು ಸವಾಲು ಹಾಕುತ್ತೇನೆ. ಅದೇ ಜನರು ಒಂದು ದಿನ ಪಶ್ಚಾತಾಪ ಪಡುತ್ತಾರೆ ಎಂದಿದ್ದಾರೆ.
ಪ್ರತಾಪ್ ಟ್ವೀಟ್ಗೆ ಕೆಲ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ನಿನ್ನಲ್ಲೂ ಪಾಸಿಟಿವ್ ವಿಚಾರಗಳಿವೆ. ಆತ್ಮವಿಶ್ವಾಸ ಹಾಗೂ ನೀನು ಉತ್ತಮ ವಾಗ್ಮಿ. ಆದರೆ ಅವುಗಳನ್ನೆಲ್ಲ ಜನರನ್ನು ಮರಳು ಮಾಡೋಕೆ ಬಳಸಿದ್ದೀಯಾ, ಒಂದು ಸುಳ್ಳು ಮುಚ್ಚುವುದಕ್ಕೆ ನೂರು ಸುಳ್ಳು ಹೇಳಿ ಬೆತ್ತಲೆಯಾಗಿದ್ದೀಯಾ, ಈಗಿನ ಸ್ಥಿತಿ ಅರಿತು ಮೊದಲು ಬದಲಾಗು, ನಿನ್ನನ್ನು ಕಸಕ್ಕಿಂತ ಕೀಳಾಗಿ ನೋಡ್ತಿದ್ದಾರೆ ಎಂದು ಬುದ್ದಿಮಾತು ಹೇಳಿದ್ದಾರೆ.
ತಮ್ಮ ನಿನ್ನಲ್ಲಿ ಟ್ಯಾಲೆಂಟ್ ಇರಬಹುದು ಆದ್ರೆ, ಅದನ್ನು ತೋರಿಸೋದು ಬಿಟ್ಟು ನಿನ್ನ ಅಹಂ ತೋರಿಸಿ ಜನರನ್ನು ಇನ್ನೂ ಕೆರಳಿಸೋಕೆ ಹೋಗ್ಬೇಡ. ಜನರಿಗೆ ನೀನು ಬೇರೆ ಬೇರೆ ದೇಶಕ್ಕೆ ಹೋಗಿರೋದು ಬೇಕಾಗಿಲ್ಲ. ನೀನೇ ಹೇಳ್ಕೊಂಡು ತಿರಿಗಿರೋದನ್ನು ಸಾಬೀತು ಮಾಡು ಅಂತ ಕೇಳ್ತಿದ್ದಾರೆ ಎಂದು ತಿಳಿಹೇಳಿದ್ದಾರೆ.