ಸ್ನೇಹಿತನ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಪ್ರತಾಪ್!

Drone Pratapa and his friend
Published on

ಬೆಂಗಳೂರು: ಜನರ ಆರೋಪಗಳಿಗೆಲ್ಲ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ತೋರಿಸಲು ಗುರುವಾರ ಖಾಸಗಿ ವಾಹಿನಿಯೊಂದರ ಲೈವ್ ಕಾರ್ಯಕ್ರಮದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ ಡ್ರೋನ್ ಪ್ರತಾಪ್, ಸ್ವತಃ ತನ್ನ ಸ್ನೇಹಿತ-ಕಾಲೇಜು ಸಹಪಾಠಿ ದರ್ಶನ್ ಕೇಳಿದ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದ ಪ್ರಸಂಗ ನಡೆಯಿತು.

ಪ್ರಸ್ತುತ ಜಪಾನ್‌ನ ಟೋಕಿಯೋದಲ್ಲಿ ವಿಮಾನಯಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ದರ್ಶನ್ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡು, ಡ್ರೋನ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವಾರು ಬೇಸಿಕ್ ಪ್ರಶ್ನೆಗಳನ್ನು ಪ್ರತಾಪ್‌ಗೆ ಕೇಳಿದರು. ಆದರೆ ಇದಕ್ಕೆ ‘ಐ ಆ್ಯಮ್ ನಾಟ್ ಸಪೋಸ್ಡ್ ಟು ಟೆಲ್ ಆಲ್ ದಟ್’ ಎಂದು ಹೇಳಿ ಪ್ರತಾಪ್ ನುಣುಚಿಕೊಂಡ. ದರ್ಶನ್ ತಮ್ಮ ಪ್ರಶ್ನೆಗಳನ್ನು ಮುಂದುವರಿಸಿದಾಗ, ‘ನಿಮ್ಮ ಇಮೇಲ್ ಐಡಿ ಕೊಡಿ, ಅಲ್ಲಿಗೇ ಉತ್ತರ ಕಳಿಸುತ್ತೇನೆ’ ಎಂದು ಹೇಳಿ ಜಾರಿಕೊಂಡಿದ್ದೂ ಆಯಿತು.

‘‘ಯಾವುದಾದರೂ ಪೇಪರ್ಸ್‌ ಬರೆದಿದ್ದೀಯಾ, ಸೈನ್ಸ್ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದೀಯಾ, ಡ್ರೋನ್ ತಯಾರಿಸುವಾಗ ಯಾವ ಕೋಡ್‌ಗಳನ್ನು ಬಳಸಿದ್ದೆ, ಡ್ರೋನ್ ಹಾರಿಸುವಾಗ ಅದರ ಲಿಫ್ಟ್ ಮತ್ತು ಡ್ರ್ಯಾಗ್‌ನ ಪ್ರಮಾಣ ಎಷ್ಟಿರುತ್ತದೆ’’ ಮುಂತಾಗಿ ಅನೇಕ ತಾಂತ್ರಿಕ ಪ್ರಶ್ನೆಗಳನ್ನು ಮುಂದೊಡ್ಡಿದಾಗ ಪ್ರತಾಪ್ ಸಮರ್ಪಕ ಉತ್ತರ ನೀಡಲಿಲ್ಲ. ಕೊನೆಗೆ, ‘‘ಇವರೆಲ್ಲ ನನಗೆ ಎಲ್ಲಿ ಸ್ನೇಹಿತರಾಗಿದ್ದರೆಂಬುದೇ ನೆನಪಿಲ್ಲ. ನಾನು ಕಷ್ಟದಲ್ಲಿದ್ದಾಗ ಇವರು ಯಾರೂ ಬಂದು ಸಹಾಯ ಮಾಡಲಿಲ್ಲ. ಈಗ ಎಲ್ಲರೂ ಪ್ರಶ್ನಿಸಲು ಮುಂದೆ ಬರುತ್ತಿದ್ದಾರೆ’’ ಎಂದು ಪ್ರತಾಪ್ ಅಸಹನೆ ವ್ಯಕ್ತಪಡಿಸಿದ್ದೂ ಆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net