ಪಿವಿಸಿ ಪೈಪ್​ ಮತ್ತು ಸ್ಥಳೀಯ ವಸ್ತುಗಳನ್ನು ಉಪಯೋಗಿಸಿ ಡ್ರೋನ್ ತಯಾರಿಸಿದ ಹೈಸ್ಕೂಲ್ ಹುಡುಗ

drone new
Published on

ಮಂಗಳೂರು: ಮದುವೆ ಸಮಾರಂಭಗಳಲ್ಲಿ ಡ್ರೋನ್ ಹಾರುವುದನ್ನು ನೋಡಿ ತಾನೂ ಅಂಥದ್ದೊಂದು ಡ್ರೋನ್ ತಯಾರಿಸಬೇಕು ಎನ್ನುವ ಹಠದಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ, ಅಲ್ಲಿ ಸಿಕ್ಕ ದುಡ್ಡಿನಲ್ಲಿ ಪಿವಿಸಿ ಪೈಪ್ ಹಾಗೂ ಇತರ ವಸ್ತುಗಳ ಸಹಾಯದಿಂದ ಕೊನೆಗೂ ಸ್ವಂತ ಡ್ರೋನ್ ತಯಾರಿಸಿದ್ದಾನೆ ಈ ಸಾಧಕ.

ನಗರದ ರಥಬೀದಿ ನಿವಾಸಿ ಜಗದೀಶ್ ಆಚಾರ್ಯ - ಶ್ಯಾಮಲಾ ಆಚಾರ್ಯ ದಂಪತಿ ಪುತ್ರ ಎಸ್.ಜೆ.ಶಮಂತ್ ಆಚಾರ್ಯ ಈ ಯುವ ಡ್ರೋನ್ ಕುತೂಹಲಿ. ಡೊಂಗರಕೇರಿ ಕೆನರಾ ಹೈಸ್ಕೂಲ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಶಮಂತ್‌ಗೆ ತಂತ್ರಜ್ಞಾನ ವಿಚಾರದಲ್ಲಿ ಅತೀವ ಆಸಕ್ತಿ. 9ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಡ್ರೋನ್ ತಯಾರಿಸಬೇಕು ಎಂದು ನಿರ್ಧರಿಸಿದ ಶಮಂತ್ ಪರೀಕ್ಷೆ ಮುಗಿದು ವಾರ್ಷಿಕ ರಜೆಯಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ದುಡ್ಡಿನಲ್ಲಿ ಡ್ರೋನ್‌ಗೆ ಬೇಕಾದ ವಸ್ತುಗಳನ್ನು ಖರೀಸಿದ್ದಾರೆ. ಜತೆಗೆ ವೆಬ್‌ಸೈಟ್, ಯೂಟ್ಯೂಬ್ ಸಹಾಯದಿಂದ ಡ್ರೋನ್ ತಯಾರಿಸುವುದು ಹೇಗೆ ಎಂದು ಕಲಿತು, ನಿರಂತರ ಪರಿಶ್ರಮದಿಂದ ಕೊನೆಗೂ ಆಕಾಶಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಯಶಸ್ಸಿನಲ್ಲಿ ಅಪ್ಪ-ಅಮ್ಮ ಹಾಗೂ ಅಣ್ಣ ಶಶಾಂಕ್ ಆಚಾರ್ಯ ಅವರ ಪಾತ್ರವೂ ಇದೆ ಎನ್ನುತ್ತಾರೆ ಶಮಂತ್.

ಶಮಂತ್ ಸಾಧನೆಗೆ ಹಲವು ಬಹುಮಾನ ಪ್ರಶಸ್ತಿಗಳು ಬಂದಿವೆ. ಬೆಸೆಂಟ್ ಕಾಲೇಜು, ಸುರತ್ಕಲ್‌ನ ಎನ್‌ಐಟಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ ವಿಜ್ಞಾನ ಇನ್‌ಸ್ಪಯರ್ ಅವಾರ್ಡ್ ಸ್ಪರ್ಧೆಯಲ್ಲಿ 10 ಸಾವಿರ ರೂ. ನಗದು ಬಹುಮಾನ ಸಿಕ್ಕಿತ್ತು. ಕಳೆದ ವರ್ಷದ ಕೇಂದ್ರ ಮೈದಾನದ ಚೌತಿ ಹಬ್ಬದ ಮೆರವಣಿಗೆ ದಿನ ಗಣೇಶನ ಮೂರ್ತಿಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡಿದ್ದರು.

ಡ್ರೋನ್ ಆಕಾಶಕ್ಕೆ ಹಾರಿದರೂ ಹಲವು ಬಾರಿ ನೆಲಕ್ಕೆ ಬಿದ್ದು ಹಾನಿಯಾಗಿದೆ. ಬಳಿಕ ಅದರಲ್ಲಿದ್ದ ಕೆಲವೊಂದು ದೋಷಗಳನ್ನು ಸರಿಪಡಿಸಿದ್ದೇನೆ. ಹಠದಿಂದ ಸಾಧನೆಯಲ್ಲಿ ಯಶಸ್ಸು ಸಾಧಿಸಿದೆ. ಈಗ ತಯಾರಿಸಿರುವುದು ಬೇಸಿಕ್ ಮಾಡೆಲ್. ಮುಂದಕ್ಕೆ ಇನ್ನಷ್ಟು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಬೇಕಿದೆ. - ಶಮಂತ್ ಆಚಾರ್ಯ, ಡ್ರೋನ್ ತಯಾರಕ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net