

ಹೊಸಕೋಟೆ : ತುರ್ತು ಸಂದರ್ಭದಲ್ಲಿ ಅಗತ್ಯ ವೈದ್ಯಕಿಯ ವಸ್ತುಗಳು, ಔಷಧ, ಪರಿಕರಗಳನ್ನು ಡ್ರೋನ್ ಮೂಲಕ ವಿತರಣೆ ಮಾಡುವ ವಿಶೇಷ "ಪೈಲೆಟ್ ಪ್ರಾಜೆಕ್ಟ್'ಗೆ ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ. ಈ ಪ್ರಕ್ರಿಯೆ ಸಂಚಾರಸಿಕ್ಕು ತಪ್ಪಿಸುವುದಲ್ಲದೇ ಕಡಿಮೆ ಅವಧಿಯಲ್ಲಿ ಔಷಧ ರೋಗಿಯನ್ನು ತಲುಪಲಿದೆ.
ಈ ಸಂಬಂಧ ಏರ್ಬೌಂಡ್ ಸಂಸ್ಥೆಯು ನಾರಾಯಣ ಹೆಲ್ತ್ನೊಂದಿಗೆ ಪಾಲುದಾರಿಕೆೆ ಘೋಷಿಸಿದೆ ಎಂದು ಏರ್ಬೌಂಡ್ನ ಸಂಸ್ಥಾಪಕ ನಮನ್ ಪುಷ್ಪ್ ತಿಳಿಸಿದ್ದಾರೆ. ತಾಲೂಕಿನ ಏರ್ಬೌಂಡ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕಿಯ ಅಗತ್ಯ ವಸ್ತುಗಳನ್ನು ಪೂರೈಸುವ ಸಮಯ ಪ್ರಮುಖವಾದುದು. ಈ ಸಂಚಾರ ದಟ್ಟಣೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕಿಯ ಅಗತ್ಯವಸ್ತುಗಳನ್ನು ತಲುಪಿಸುವುದು ಕಷ್ಟಕರ. ಹೀಗಾಗಿ ಡ್ರೋನ್ ಡೆಲಿವರಿ ಯೋಜನೆ ಚಾಲ್ತಿಗೆ ತರಲು ಹೆಜ್ಜೆ ಇಟ್ಟಿದ್ದೇವೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ವಿತರಣಾ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮಾನವರಹಿತ ವೈಮಾನಿಕ ವಾಹನ ಡ್ರೋನ್ ಬಳಸಿಕೊಂಡು ವೈದ್ಯಕಿಯ ಅಗತ್ಯಗಳಾದ ರಕ್ತದ ಮಾದರಿಗಳು, ಪರೀಕ್ಷಾ ಕಿಟ್ಗಳು ಮತ್ತು ಅಗತ್ಯ ಸರಬರಾಜುಗಳನ್ನು ಒಳಗೊಂಡಂತೆ ದಿನಕ್ಕೆ 10 ದೈನಂದಿನ ವೈದ್ಯಕಿಯ ವಿತರಣೆಗಳನ್ನು ಪೂರ್ಣಗೊಳಿಸಲು ನಾರಾಯಣ ಹೆಲ್ತ್ನೊಂದಿಗೆ 3 ತಿಂಗಳ ಪ್ರಾಯೋಗಿಕ ಯೋಜನೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡ್ರೋನ್ ಕಾರ್ಯಾಚರಣೆ ಹೇಗೆ?: ಕೇವಲ 2.5 ಕೆ.ಜಿ. ತೂಕ ಹೊಂದಿರುವ ಡ್ರೋನ್ 1 ಕೆ.ಜಿ ತೂಕದ ವಸ್ತುಗಳನ್ನು ಡೆಲಿವರಿ ಮಾಡಲು ಶಕ್ತವಾಗಿದೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಾಗುವ ಡ್ರೋನ್ 40 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಜೊತೆಗೆ, 400 ಮೀಟರ್ ಎತ್ತರದ ವರೆಗೂ ಈ ಡ್ರೋನ್ ಹಾರಾಟ ನಡೆಸಲಿದ್ದು, ಸುರತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುವನ್ನು ತಲುಪಿಸಲಿದೆ. ಇದಕ್ಕೆ ಬಳಸಲಾಗಿರುವ ಸಾಫ್ಟ್ವೇರ್ ಹೆಸರು ರುದ್ರ. ಇದು ಸುರತವಾಗಿ ವಸ್ತುಗಳನ್ನು ಡೆಲಿವರಿ ಮಾಡಲಿದೆ.
ವಿಶ್ವಾಸಾರ್ಹತೆ ವೃದ್ಧಿ : "ನಾರಾಯಣ ಹೆಲ್ತ್ನಲ್ಲಿ, ರೋಗಿಗಳ ಆರೈಕೆ ಮತ್ತು ಕಾರ್ಯಾಚರಣೆ ದಕ್ಷತೆ ಹೆಚ್ಚಿಸಲು ನವೀನ ಆವಿಷ್ಕಾರ ಅಳವಡಿಸಿಕೊಳ್ಳುತ್ತಲೇ ಇದ್ದೇವೆ. ಈಗ ಏರ್ಬೌಂಡ್ನೊಂದಿಗೆ ಡ್ರೋನ್ ವಿತರಣೆಯ ಪಾಲುದಾರಿಕೆಯೂ ವೈದ್ಯಕಿಯ ಸೇವೆ ವಿತರಣೆ ವೇಗ ಮತ್ತು ವಿಶ್ವಾಸಾರ್ಹತೆ ಸುಧಾರಿಸುವ ಭರವಸೆ ನೀಡಿದೆ ಎಂದು ನಾರಾಯಣ ಹೆಲ್ತ್ನ ಸಂಸ್ಥಾಪಕ ಮತ್ತು ಅಧ್ಯಕ್ಷ್ಷ ಡಾ. ದೇವಿಶೆಟ್ಟಿ ಹೇಳಿದರು.