ಡ್ರೋನ್ ಮೇಲೆ ಸರ್ಕಾರದ ಕಣ್ಣು

drone new
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಎಲ್ಲೆಲ್ಲೂ ಡ್ರೋನ್‌ಗಳ ಝೇಂಕಾರ ಹೆಚ್ಚುತ್ತಿದ್ದು, ಭದ್ರತೆಗೂ ಸವಾಲಾಗುವ ಹಿನ್ನೆಲೆಯಲ್ಲಿ ಸರ್ಕಾರ ಅವುಗಳ ಮೇಲೆ ಹದ್ದುಗಣ್ಣಿಡಲು ಮುಂದಾಗಿದೆ.

ಖಾಸಗಿ ಕಾರ್ಯಕ್ರಮಗಳು, ವಿವಾಹ ಮತ್ತಿತರ ಸಮಾರಂಭಗಳು, ಸಿನಿಮಾ, ಜಾಹೀರಾತು, ವಿಡಿಯೋ ನಿರ್ಮಾಣಗಳಿಗೆ ಈಗ ಡ್ರೋನ್ ಇಲ್ಲ ಎಂದರೆ ಆಗುವುದಿಲ್ಲ. ಡ್ರೋನ್ ಹಾರಾಟ ಹಲವು ಬಾರಿ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯೂ ಇಲ್ಲದಿಲ್ಲ. ಕೆಲ ತಿಂಗಳ ಹಿಂದೆ ಮಂಗಳೂರು ಎಸ್‌ಇಝಡ್ ಬಳಿ ಡ್ರೋನ್ ಹಾರಾಡುತ್ತಿತ್ತು ಎನ್ನುವ ವದಂತಿಯೂ ಹಬ್ಬಿತ್ತು.

ಎಲ್ಲಾ ಖಾಸಗಿ ಡ್ರೋನ್‌ಗಳೂ ವಾಣಿಜ್ಯ ಕೆಲಸಕ್ಕಾಗಿ ಬಳಕೆ ಮಾಡುವುದಾದರೆ ಅಂತಹವುಗಳನ್ನು ವ್ಯವಸ್ಥಿತವಾಗಿ ನೋಂದಣಿ ಮಾಡಬೇಕಿದೆ. ಅದಕ್ಕೆ ಕೇಂದ್ರ ಸರ್ಕಾರವೇ ಇದೇ ಜನವರಿ 13ಕ್ಕೆ ಸುತ್ತೋಲೆ ಹೊರಡಿಸಿದ್ದು, ಅದರಂತೆ ಜನವರಿ 31ರ ವರೆಗೂ ನಾಗರಿಕ ವಿಮಾನಯಾನ ಸಚಿವಾಲಯದ ‘ಡಿಜಿಟಲ್ ಸ್ಕೈ’ ವೆಬ್‌ಸೈಟ್(ಡಿಡಿಡಿ.ಜಿಜಜಿಠಿಚ್ಝ.ಜ್ಚ.ಜಟ.ಜ್ಞಿ)ನಲ್ಲಿ ಆನ್‌ಲೈನ್ ಮೂಲಕವೇ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದ್ದು, ಅವಧಿ ಈಗ ಪೂರ್ಣಗೊಂಡಿದೆ. ಈ ಅವಧಿ ವಿಸ್ತರಣೆ ಮಾಡುವುದೇ ಇಲ್ಲವೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ.

2018ರ ಆಗಸ್ಟ್ ತಿಂಗಳಲ್ಲೇ ಡ್ರೋನ್ ಮೇಲೆ ಕಡಿವಾಣ ಹಾಕಲು ಸರ್ಕಾರ ನೀತಿ ರೂಪಿಸಿತ್ತು. ಅದರಂತೆ ಡ್ರೋನ್ ಮಾಲೀಕರು ವಿಶಿಷ್ಟ ಗುರುತು ಸಂಖ್ಯೆ ಹಾಗೂ ಮಾನವರಹಿತ ಹಾರಾಟ ನಿರ್ವಹಣಾ ಅನುಮತಿ(ಯುಎಒಪಿ) ಪಡೆಯುವ ಅವಶ್ಯಕತೆ ಇದೆ. ಡ್ರೋನ್ ನೋಂದಣಿಯಾಗದಿದ್ದರೆ ಅದು ನಾಗರಿಕ ವಿಮಾನಯಾನದ ಅವಶ್ಯಕತೆ(ಸಿಎಆರ್) ನಿಯಮದ ಉಲ್ಲಂಘನೆಯಾದಂತೆ.

ನಾಗರಿಕ ಬಳಕೆಯ ಡ್ರೋನ್‌ಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಅವುಗಳ ಘೋಷಣೆಗೆ ಒಮ್ಮೆ ಅವಕಾಶವನ್ನು ಒದಗಿಸಲಾಗಿತ್ತು. ಅದರ ಪ್ರಕಾರ ಡಿಜಿಟಲ್ ಸ್ಕೈ ವೆಬ್‌ಸೈಟ್‌ನಲ್ಲಿ ಮೊದಲು ಡ್ರೋನ್ ಮಾಲೀಕರು ತಮ್ಮ ಪ್ರಾಥಮಿಕ ಮಾಹಿತಿಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಅವರಿಗೆ ಓನರ್‌ಶಿಪ್ ಎಕ್ನಾಲಜ್ ನಂಬರ್(ಒಎಎನ್) ಸಿಗುತ್ತದೆ. ಅದನ್ನು ಬಳಸಿಕೊಂಡು ಮಾಲೀಕರು ತಮ್ಮ ಡ್ರೋನ್ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು, ಆಗ ಅವರಿಗೆ ಡ್ರೋನ್ ಎಕ್ನಾಲಜ್ ನಂಬರ್(ಡಿಎಎನ್) ನೀಡಲಾಗುತ್ತದೆ. ಒಬ್ಬರಲ್ಲಿ ಒಂದಕ್ಕಿಂತ ಹೆಚ್ಚು ಡ್ರೋನ್ ಇದ್ದಲ್ಲಿ ಪ್ರತಿ ಡ್ರೋನ್‌ಗೂ ಪ್ರತ್ಯೇಕ ಡಿಎಎನ್ ಪಡೆಯುವುದು ಕಡ್ಡಾಯ.

ಇನ್ನೂ ಹಲವು ಡ್ರೋನ್ ಹಾರಾಟಗಾರರು ನೋಂದಣಿ ಮಾಡಿಕೊಳ್ಳಲು ಬಿಟ್ಟು ಹೋಗಿರಬಹುದು, ಹಾಗಾಗಿ ಮತ್ತೆ ಕೇಂದ್ರ ಸರ್ಕಾರ ನೋಂದಣಿಗೆ ಅವಕಾಶ ನೀಡಬಹುದು ಎನ್ನುವುದು ಅಧಿಕಾರಿಗಳ ಅಭಿಮತ. ನೆನಪಿಡಿ.ಭಾರತದಲ್ಲಿ ಇನ್ನು ಒಎಎನ್/ಡಿಎಎನ್ ಇಲ್ಲದೆ ಡ್ರೋನ್ ಹಾರಾಟ ಮಾಡುವುದು ಪತ್ತೆಯಾದರೆ ಅದು ಶಿಕ್ಷಾರ್ಹ ಅಪರಾಧ ಎನ್ನಿಸಿಕೊಳ್ಳಲಿದೆ.

ಡ್ರೋನ್ ಮಾತ್ರವಲ್ಲ

ಆಗಸದಲ್ಲಿ ಹಾರುವ ಎಲ್ಲಾ ರೀತಿಯ ಮಾಡೆಲ್‌ಗಳು, ಪ್ರೊಟೊಟೈಪ್‌ಗಳು, ಆಟಿಕೆ, ರಿಮೋಟ್ ಕಂಟ್ರೋಲ್ ವಿಮಾನಗಳೆಲ್ಲವನ್ನೂ ಈ ನಿಯಮದ ಅಡಿಗೆ ತರಲಾಗಿದೆ. ಅವುಗಳೆಲ್ಲವನ್ನೂ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಕಡ್ಡಾಯ ಎನ್ನುತ್ತದೆ ಡಿಜಿಟಲ್ ಸ್ಕೈ ನಿಯ ಮಾವಳಿ.

ನೋ ಪರ್ಮಿಶನ್-ನೋ ಟೇಕಾಫ್ ಇನ್ನು ಮುಂದೆ ಡ್ರೋನ್ ಹಾರಾಟಕ್ಕೆ ಬೇಕಾದ ಅನುಮತಿಯನ್ನು ಮೊಬೈಲ್‌ಆ್ಯಪ್ ಮೂಲಕವೇ ಪಡೆದುಕೊಳ್ಳುವ ಪ್ರಕ್ರಿಯೆ ಶುರುವಾಗಲಿದೆ. ಅದರಂತೆ ಡ್ರೋನ್ ಹಾರಿಸುವ ಪ್ರದೇಶದ ಮಾಹಿತಿಯನ್ನು, ಜಿಪಿಎಸ್ ಲೊಕೇಶನ್ ಮೂಲಕ ನೀಡಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ, ಅನುಮತಿ ಇಲ್ಲದಿದ್ದರೆ ಡ್ರೋನ್ ಹಾರಾಟ ಸಾಧ್ಯವಾಗದು. ಇಂತಹ ವ್ಯವಸ್ಥೆ ಮೂಲಕ ಭದ್ರತೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಡ್ರೋನ್ ನೋಂದಣಿ ಮಾಡುವಂತೆ ಕೆಲ ತಿಂಗಳ ಹಿಂದೆಯೇ ಸೂಚನೆ ಬಂದಿತ್ತು, ಅದರಂತೆ ಡಿಜಿಟಲ್ ಸ್ಕೈ ಮೂಲಕ ನೋಂದಣಿ ಮಾಡಿಕೊಂಡಿದ್ದೇನೆ. ನೋಂದಣಿ ಮಾಡಿಕೊಳ್ಳದವರಿಗೆ ಮುಂದೆ ಅವಕಾಶ ಇದೆಯೇ ಎಂಬ ಮಾಹಿತಿ ತಿಳಿದಿಲ್ಲ. - ಶೈನ್ ರಾಘು, ಡ್ರೋನ್ ಹಾರಾಟ ಮಾಡುವವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net