ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್, ಕ್ಯಾಮರಾ ಚಿತ್ರೀಕರಣ ನಿಷೇಧ

IMG-20240209-WA0178
Published on

ಗುಂಡ್ಲುಪೇಟೆ: ‘ಕರ್ನಾಟಕ ಊಟಿ’ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಮತ್ತು ಕ್ಯಾಮರಾ ಚಿತ್ರೀಕರಣಕ್ಕೆ ತಹಸೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ನಡುವೆ ಕಳೆದ ತಿಂಗಳು ಪತ್ರಕರ್ತರೊಬ್ಬರು ನಿಷೇಧಿತ ವಲಯ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಂಜೆ 6 ಗಂಟೆ ವೇಳೆ ಡ್ರೋನ್ ಬಳಸಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹಾಗೂ ಪ್ರತಿನಿತ್ಯ ದೇವಸ್ಥಾನದ ಬಳಿ ಬರುವ ಕಾಡಾನೆಯ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸಂಜೆ ವೇಳೆ ದೇವಾಲಯದ ಹತ್ತಿರ ಬರುವ ಕಾಡಾನೆ ಸನಿಹಕ್ಕೆ ಪ್ರವಾಸಿಗರು ಸನಿಹಕ್ಕೆ ತೆರಳಿ ಛಾಯಾಚಿತ್ರ ತೆಗೆಯುವುದು ಹಾಗೂ ಸೆಲ್ಪಿ ಕ್ಲಿಕ್ಕಿಸಿಕೊಂಡು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಕಾರಣ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ಕಾಡಾನೆಯಿಂದ ಪ್ರವಾಸಿಗರಿಗೂ ಸಹ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎಫ್‌ಓ ಮಂಜುನಾಥ ಅವರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅರಣ್ಯಾಧಿಕಾರಿ ಕೋರಿಕೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಕ್ಯಾಮರಾ ಚಿತ್ರೀಕರಣ ಹಾಗೂ ಡ್ರೋನ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಮುಜರಾಯಿ ಇಲಾಖೆಯ ಇಲಾಖೆ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net