

ವಿಜಯವಾಣಿ ಸುದ್ದಿಜಾಲ ಕುಂದಾಣ
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ವ್ಯಾಪ್ತಿಯಲ್ಲ ಮತ್ತೊಮ್ಮೆ ಹೊಸದಾಗಿ ಕೈಗಾರಿಕೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂಬ ಗುಸುಗುಸು ಎದ್ದಿದ್ದು, ಆಲೂರುದುದ್ದನಹಳ್ಳಿ ಹಾಗೂ ಕುಂದಾಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ, ಇದರ ಜತೆಗೆ ಕುಂದಾಣ ಭಾಗದಲ್ಲಿನ ಜಮೀನುಗಳ ಮೇಲೂ ಸರ್ಕಾರ ಕಣ್ಣಿಟ್ಟಿದೆ ಎಂಬ ಅನುಮಾನ ಮೂಡಿಸಿದ್ದು ಗ್ರಾಮಸ್ಥರು ಈ ಬಗ್ಗೆ ಗೊಂದಲಗೊಂಡಿದ್ದಾರೆ.
ಡ್ರೋನ್ ಮೂಲಕ ಸರ್ವೆ: ಕಳೆದ ಕೆಲವು ದಿನಗಳ ಹಿಂದೆ ಜಮೀನುಗಳ ಮೇಲೆ ಡ್ರೋನ್ ಹಾರಾಟ ಕಂಡುಬಂದಿದೆ ಎಂಬ ಮಾತು ಕೇಳಿಬರುತ್ತಿದ್ದು, ಡ್ರೋನ್ ಮೂಲಕ ಜಮೀನುಗಳ ಸರ್ವೇ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂಬ ಅನುಮಾನ ಮೂಡಿಸಿದೆ ಎಂದು ಗ್ರಾಮಸ್ಥರು ಆತಂಕ ತೋಡಿಕೊಂಡಿದ್ದಾರೆ. ಯಾರಿಗೂ ಮಾಹಿತಿ ನೀಡಿದೆ ಕೆಲವು ಜಮೀನುಗಳ ಮೇಲೆ ಡ್ರೋನ್ ಸರ್ವೆ ಕಾರ್ಯ ನಡೆಸುತ್ತಿರುವುದನ್ನು ಕಂಡಿದ್ಧೇವೆ ಎಂದು ಹಲವು ಗ್ರಾಮಸ್ಥರು ಪಂಚಾಯಿತಿ ಮೆಟ್ಟಿಲೇರಿದ್ದು ಗೊಂದಲ ಪರಿಹರಿಸುವಂತೆ ಪಟ್ಟು ಹಿಡಿದಿದ್ದಾರೆ.
ಭೂಗಳ್ಳರ ಕೈಚಳಕ ಹೆಚ್ಚಿದೆ: ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ಬಳಿಕ ಜಮೀನುಗಳಿಗೆ ಚಿನ್ನದ ಬೆಲೆ ಬಂದಿರುವುದು ಇಲ್ಲಿನ ರೈತರ ನಿದ್ರೆಕೆಡಿಸಿದಂತಾಗಿದೆ. ಬಡವರನ್ನು ವಂಚಿಸುವ ಭ್ರಷ್ಟ ಅಧಿಕಾರಿಗಳ ಜತೆ ಶಾಮೀಲಾಗಿರುವ ಭೂಗಳ್ಳರು ರಾಜಕಾಲುವೆ ಗುಂಡು ತೋಪು, ಸಾವಿರಾರು ಎಕರೆ ಸಾರ್ವಜನಿಕರ ಅನುಕೂಲಕ್ಕೆ ಮೀಸಲಿದ್ದ ಸರ್ಕಾರಿ ಜಮೀನು ಸೇರಿ ಖಾಸಗಿ ಆಸ್ತಿಗಳಿಗೂ ಮೂಲ ದಾಖಲೆಗಳಿಗೆ ಮಸಿ ಬಳಿದು ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಹೆಚ್ಚೆಚ್ಚು ಕೇಳಿಬರುತ್ತಿದೆ.
ಗೊಂದಲಕ್ಕೆ ಸ್ಪಷ್ಟಣೆ ಬೇಕು: ಇತ್ತೀಚೆಗೆ ಕುಂದಾಣ ಹಾಗೂ ಆಲೂರು ದುದ್ದನಹಳ್ಳಿ ಸೇರಿ ನಾಲ್ಕೈದು ಗ್ರಾಮಗಳಲ್ಲಿ ಡ್ರೋನ್ ಮೂಲಕ ಸರ್ವೆ ನಡೆಸಾಗುತ್ತಿದೆ ಎಂಬ ಮಾತು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಡ್ರೋನ್ ಹಾರಾಟ ಇತ್ತೀಚಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತ್ಯಕ್ಷ ದರ್ಶಿಗಳಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕೈಗಾರಿಕೆಗಳಿಗೆ ಮತ್ತಷ್ಟು ಜಮೀನು ಸ್ವಾಧೀನ ಮಾಡಿದರೆ ಅನುಕೂಲಕ್ಕಿಂತ ಅನಾನುಕೂಲಗಳು ಹೆಚ್ಚಾಗಲಿವೆ ತಲತಲಾಂತರ ಗಳಿಂದ ವಾಸಮಾಡಿಕೊಂಡು ಬಂದಿರುವ ಮನೆ ಮಠ ಜಮೀನುಗಳನ್ನು ಕಳೆದುಕೊಳ್ಳುತ್ತಿರುವ ಸಂಕಷ್ಟ ಎದುರಾಗಲಿದೆ ಎಂಬ ನೋವು ತೋಡಿಕೊಳ್ಳುತ್ತಿರುವ ರೈತರು ಈ ಗೊಂದಲಕ್ಕೆ ತೆರೆ ಎಳೆಯಬೇಕು ಸರ್ವೇ ಆರಂಭವಾಗಿದೆಯೇ ಇಲ್ಲವೇ ಎಂಬುದನ್ನು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಲೂರು ದುದ್ದನಹಳ್ಳಿ ಹಾಗೂ ಕುಂದಾಣ ವ್ಯಾಪ್ತಿಯಲ್ಲಿನ ಕೆಲವು ಜಮೀನುಗಳ ಬಳಿ ಡ್ರೋನ್ ಹಾರಾಟ ನಡೆಯುತ್ತಿರುವ ಬಗ್ಗೆ ಹಲವರು ನೋಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಈ ಭಾಗದಲ್ಲಿಯೂ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಸರ್ಕಾರ ದೇವನಹಳ್ಳಿ ತಾಲೂಕಿನ ಮೇಲೆ ಇಷ್ಟೊಂದು ಏಕೆ ಕಣ್ಣಾಕಿದೆ ತಿಳಿಯುತ್ತಿಲ್ಲ.
ವೆಂಕಟಪ್ಪ, ಆಲೂರು ದುದ್ದನಹಳ್ಳಿ
ದೇವನಹಳ್ಳಿ ತಾಲೂಕಿನಲ್ಲಿ ಈಗಾಗಲೇ ನಿರೀಕ್ಷೆಗೂ ಮೀರಿ ಸರ್ಕಾರ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ರೈತರ ಬದುಕನ್ನು ಬೀದಿಗೆ ತಳ್ಳಿದೆ. ಇತ್ತೀಚಿಗೆ ಗ್ರಾಮದಲ್ಲಿ ಡ್ರೋನ್ ಸರ್ವೆಯ ಆತಂಕ ಗ್ರಾಮಸ್ಥರನ್ನು ಕಾಡುತ್ತಿದ್ದು, ಮತ್ತೊಮ್ಮೆ ಭೂಸ್ವಾಧೀನಕ್ಕೆ ಕೈ ಹಾಕುವ ಪ್ರಸಂಗ ಎದುರಾಗಲಿದೆಯೇ ಎಂಬ ಅನುಮಾನ ಮೂಡಿಸಿದೆ ಈ ಬಗ್ಗೆ ಮಂತ್ರಿಗಳು ಹಾಗೂ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು.
ರವಿಕುಮಾರ್, ಪ್ರಗತಿಪರ ರೈತ ದೇವನಹಳ್ಳಿ