

ಮಂಗಳೂರು: ತುಳು ರಂಗಭೂಮಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರದರ್ಶನ ಕಂಡು ಚಾರಿತ್ರಿಕ ದಾಖಲೆ ನಿರ್ಮಿಸಿದ ‘ಶಿವದೂತೆ ಗುಳಿಗೆ’ ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಜ.11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್‌ನಲ್ಲಿ ಜರುಗಲಿದೆ.
ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಹಿರಿಯ ಪತ್ರಕರ್ತ ಪರಮಾನಂದ ಸಾಲಿಯಾನ್ ಅವರಿಗೆ ದಿ.ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಖ್ಯಾತ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಿರೂಪಕಿ ಅನುಶ್ರೀ ಭಾಗವಹಿಸಲಿದ್ದಾರೆ ಎಂದು ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಆರ್.ಕೆ. ನಾಯರ್, ಪದ್ಮರಾಜ್ ಆರ್., ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಬಿ. ನಾಗರಾಜ್ ಶೆಟ್ಟಿ, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಎಸಿಪಿ ಎಸ್. ಮಹೇಶ್ ಕುಮಾರ್, ಕಾಸರಗೋಡು ಚಿನ್ನಾ, ಕುಮಾರ್ ಎನ್. ಬಂಗೇರ, ಹರೀಶ್ ಬಂಗೇರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
2025ರ ತನಕ ಅನೇಕ ರಾಜ್ಯ ಹಾಗೂ ವಿದೇಶಗಳಲ್ಲಿ ಈ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಂಡ ಈ ನಾಟಕ 2024ರ ಮೇ ತಿಂಗಳಿನಲ್ಲಿ ಮಲಯಾಳಂ ಭಾಷೆಯಲ್ಲೂ ಪ್ರದರ್ಶನಕ್ಕೆ ಅಣಿಯಾಗಿ ಒಂದು ಸಾವಿರ ಪ್ರದರ್ಶನದತ್ತ ಹೆಜ್ಜೆ ಇಟ್ಟಿದೆ. ಮುಂದಕ್ಕೆ ಇಂಗ್ಲೀಷ್ ಹಾಗೂ ಮರಾಠಿ ಭಾಷೆಯಲ್ಲಿ ಪ್ರದರ್ಶನ ಕಾಣಲಿದ್ದು, ಐದು ಭಾಷೆಗಳಲ್ಲಿ ಒಂದೇ ಕಲಾವಿದರು ಪ್ರಸ್ತುತಪಡಿಸುತ್ತಿರುವ ಮೊದಲ ನಾಟಕ ‘ಶಿವಧೂತೆ ಗುಳಿಗೆ’ ಆಗಲಿದೆ ಎಂದರು.
ಕಲಾವಿದರಾದ ಸ್ವರಾಜ್ ಶೆಟ್ಟಿ, ಪ್ರಜಿತ್, ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಕೋಕಿಲ, ಚಂದ್ರ ಕೊಡಿಯಾಲ್ ಬೈಲ್, ಪ್ರೇಮ್ ಶೆಟ್ಟಿ ಸುರತ್ಕಲ್, ನಿತೇಶ್ ಪೂಜಾರಿ ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು.