ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

abivruddi kamagari
Published on

ಮಡಿಕೇರಿ: ಸಂಪಾಜೆ ಮತ್ತು ಚೆಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ೧೧೦.೬೬ ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಂಗಳವಾರ ಚಾಲನೆ ನೀಡಿದರು.

ಸಂಪಾಜೆ ಬಳಿಯ ದುಗ್ಗಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ದುಗ್ಗಳ ಕುಟುಂಬದವರು ಸೇರಿದಂತೆ ಸುಮಾರು ೧೮ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ವಿಕಲಚೇತನರು, ವೃದ್ದರು ಹಾಗೂ ಹಲವರಿಗೆ ಉಪಯುಕ್ತವಾಗುತ್ತದೆ ಎಂದು ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.

ಬಳಿಕ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಡ್ಕ ಹೈಟೆಕ್ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಚೆಂಬು ಊರುಬೈಲು ಬಳಿ ಮಳೆಯಿಂದ ಹಾನಿಯಾದ ಸೇತುವೆಯ ಮರು ನಿರ್ಮಾಣ, ಪನೆಡ್ಕ ದೇವಸ್ಥಾನದ ಬಳಿಯಿಂದ ಬೈನೆಗುಂಡಿ ರಸ್ತೆ ಅಭಿವೃದ್ಧಿ, ಬಾಲಂಬಿ ಚೆಟ್ಟೆಕಲ್ಲು ಜೋಡಿಯಿಂದ ಸಾರ್ವಜನಿಕ ರಸ್ತೆ ಅಭಿವೃದ್ಧಿ, ಎಂ.ಚೆಂಬು ಬಳಿಯ ರೆಂಕಿಲ್ ಮೊಟ್ಟೆ ಕಾಲೋನಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು, ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಇಲ್ಲಿನ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳು ಮತ್ತಷ್ಟು ತಲುಪಿಸಬೇಕು. ಈಗಾಗಲೇ ೧೨ ಕೋಟಿ ರೂ ವೆಚ್ಚದಲ್ಲಿ ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಜಿಲ್ಲೆಯ ಎಲ್ಲಾ ರಸ್ತೆಯ ಅಭಿವೃದ್ದಿಗೆ ಚಾಲನೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ೧೭ ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಈಗಾಗಲೇ ಬಾಳೆಲೆ, ಹುದಿಕೇರಿ, ಸಿದ್ದಾಪುರ, ಮೂರ್ನಾಡು ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ೧೨೦ ರೂ ಕೋಟಿ ವೆಚ್ಚ ಮಾಡಲಾಗುತ್ತಿದೆ. ಹಾಗೆಯೇ ಭಾಗಮಂಡಲ, ಕಾಟಕೇರಿ, ಸಂಪಾಜೆ, ಕೂಡಿಗೆ ಇಲ್ಲಿಯೂ ಸಹ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾಪ ಇದೆ. ಜಿಲ್ಲೆಯ ಶಾಲೆಗಳು ಅಂಗನವಾಡಿಗಳು, ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯ ವತಿಯಿಂದ ವಿವಿಧ ಅಭಿವೃದ್ಧಿ ಕೆಲಸಗಳು, ಹೊಸ ತಾಲೂಕು ಆಡಳಿತ ಭವನ ನಿರ್ಮಾಣ, ಹೀಗೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಸರ್ಕಾರ ಪ್ರತೀ ವರ್ಷ ೫೮ ಸಾವಿರ ಕೋಟಿ ರೂ. ವಿನಿಯೋಗ ಮಾಡುತ್ತದೆ. ಆ ನಿಟ್ಟಿನಲ್ಲಿ ರಾಷ್ಟ್ರದ ಅಭಿವೃದ್ದಿಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ೧.೨೦ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಒಂದಲ್ಲಾ ಒಂದು ರೀತಿಯಲ್ಲಿ ತಲುಪುತ್ತಿವೆ. ಪ್ರತಿ ಬಡ ಕುಟುಂಬವೂ ಆರ್ಥಿಕವಾಗಿ ಸಧೃಡ ಆಗಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಲಾಗುವುದು ಎಂದು ಪೊನ್ನಣ್ಣ ನುಡಿದರು.

ಬಳಿಕ ಸಾರ್ವಜನಿಕರಿಂದ ಆಹವಾಲು ಆಲಿಸಿದರು. ಸಾರ್ವಜನಿಕರು ಅರಣ್ಯ ಹಾಗೂ ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಹೆಚ್ಚಿನ ದೂರು ಸಲ್ಲಿಸಿದರು. ಸಾರ್ವಜನಿಕರಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಗಮನಹರಿಸುವಂತೆ ಮುಖ್ಯಮಂತ್ರಿ ಅವರು ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ನಿರ್ದೇಶನ ನೀಡಿದರು.

ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥರಾಮ, ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಕುಮಾರ್, ಪ್ರಮುಖರಾದ ಶಶಿಕಲಾ, ಗಿರೀಶ್ ಹೊಸೂರು, ಲೋಕೇಶ್ ಊರುಬೈಲು, ಸೂರಜ್ ಹೊಸೂರು, ಮನು, ರಾಜೇಶ್ವರಿ, ಇಸ್ಮಾಯಿಲ್, ತಾಲೂಕು ಪಂಚಾಯಿತಿ ಸಿಇಒ ಶೇಖರ್, ಬಿಆರ್‌ಸಿ ಗುರುರಾಜ್, ಎಂಜಿನಿಯರ್‌ಗಳಾದ ರಘು, ಕುಮಾರಸ್ವಾಮಿ, ಅಶೋಕ್, ಪಿಡಿಒ ಬಿದ್ದಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net