

ಚಿತ್ರದುರ್ಗ: ಅಂದಾಜು 4 ಎಕರೆ ವಿಸ್ತೀರ್ಣದಲ್ಲಿರುವ ನಗರದ ಆರ್‌ಟಿಒ ಕಚೇರಿ ಆವರಣದಲ್ಲಿಯೇ ಡ್ರೈವಿಂಗ್ ಟ್ರಾೃಕ್ ಸ್ಥಾಪಿಸುವಂತೆ ಸಾರಿಗೆ ಆ ಯುಕ್ತ ಎಸ್.ಸಿದ್ದರಾಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಸಾರಿಗೆ ಇಲಾಖೆ ಕಚೇರಿಗೆ ಮಂಗಳವಾರ ಭೇಟಿ ನೀಡಿ, ಬೇರೊಂದು ಸ್ಥಳದಲ್ಲಿ ಈ ಟ್ರಾೃಕ್ ಮಾಡಿದರೆ ಅನುಕೂಲಕ್ಕಿಂತ, ಅನನುಕೂಲವೇ ಹೆಚ್ಚಾಗುತ್ತದೆ. ಕಚೇರಿ ಸ್ಥಳ ಅತ್ಯಂತ ಪ್ರಶಸ್ತವಾಗಿದೆ. ಟ್ರಾೃಕ್ ಸ್ಥಾಪನೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಇಲಾಖೆ ಶಿವಮೊಗ್ಗ ವಿಭಾಗೀಯ ಜಂಟಿ ಆಯುಕ್ತೆ ಗಾಯತ್ರಿದೇವಿ ಅವರಿಗೆ ಸೂಚಿಸಿದರು.
ಬೆಂಗಳೂರಿಂದ ತಜ್ಞರ ತಂಡವನ್ನು ಕಳಿಸುವೆ. ಪರಿಶೀಲಿಸಿ ಸ್ಥಳ ಸೂಕ್ತವೆಂದು ವರದಿ ನೀಡಿದರೆ ಇದೇ ಸ್ಥಳವನ್ನು ಅಂತಿಮಗೊಳಿಸೋಣ ಎಂದರು.
ಇದೇ ವೇಳೆ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತಗಳ ತಡೆ ನಿಟ್ಟಿನಲ್ಲಿ ಬ್ಲಾೃಕ್‌ಸ್ಪಾಟ್‌ಗಳನ್ನು ಸರಿಪಡಿಸಬೇಕು. ಇದಕ್ಕಾಗಿ ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆಗಳ ಜತೆ ಸಮನ್ವಯದಿಂದ ಕೆಲಸ ಮಾಡಬೇಕೆಂದು ಅಧಿ ಕಾರಿಗಳಿಗೆ ತಾಕೀತು ಮಾಡಿದರು.
ಎಲ್‌ಎಲ್‌ಆರ್, ಡಿಎಲ್ ಟೆಸ್ಟ್ ವೇಳೆ ನಿಯಮಗಳನ್ನು ಪಾಲಿಸಬೇಕು. ಮನಸೋಇಚ್ಛೆ ಸವಾರರನ್ನು ಪರೀಕ್ಷೆಯಲ್ಲಿ ಪಾಸು ಮಾಡಿದರೆ ಅಪಘಾತಗಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಚಾಲಕರಿಗೆ ವಾಹನ ಚಾಲನೆ, ಸಂಚಾರ ನಿಯಮಗಳು ಸರಿಯಾಗಿ ಗೊತ್ತಿರಬೇಕು ಎಂದರು.
ಸಾರಥಿ, ವಾಹನ್
ವಾಹನ ಸವಾರರು, ಮಾಲೀಕರು ಆನ್‌ಲೈನ್ ಮೂಲಕ ಇಲಾಖೆಯ ವಿವಿಧ 31 ಸೇವೆಗಳನ್ನು ಪಡೆಯಲು ಸಾರಥಿ ಹಾಗೂ ವಾಹನ್ ಅವಕಾಶ ಒದಗಿಸಿದೆ ಎಂದು ಆಯುಕ್ತರು ಹೇಳಿದರು.
ವಿಜಯವಾಣಿಯೊಂದಿಗೆ ಮಾತನಾಡಿ, ಎಲ್‌ಎಲ್‌ಆರ್, ಡಿಎಲ್, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಪತ್ರ,ನವೀಕರಣ, ವಿಳಾಸ, ಹೆಸರು ಬದಲಾವಣೆ, ಸಾರಿಗೇತರ ಹೊಸ ವಾಹನ ನೋಂದಣಿ, ಎನ್‌ಒಸಿ, ಕಂತು-ಕರಾರು ಒಪ್ಪಂದ, ಸರಕು ಸಾಗಣೆ ವಾಹನ ರಹದಾರಿ, ಮೋಟಾರ್ ಕ್ಯಾಬ್ ರಹದಾರಿ ನೀಡುವಿಕೆ, ರಹದಾರಿ ನವೀಕರಣ ಇತ್ಯಾದಿ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ.
ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಬೀಳಲಿದೆ. ವಾಹನ ಸವಾರರು, ಮಾಲೀಕರು ಆರ್‌ಟಿಒ ಕಚೇರಿಗಳಿಗೆ ಅಡ್ಡಾಡುವುದು, ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪಲಿದೆ ಎಂದರು.
ಡ್ರೈವಿಂಗ್ ಟ್ರಾೃಕ್ ಹಾಗೂ ಫಿಟ್‌ನೆಸ್ ಸರ್ಟಿಫಿಕೆಟ್ ಟೆಸ್ಟ್‌ಗಾಗಿ ಚಿತ್ರದುರ್ಗ ತಾಲೂಕು ಐಯ್ಯನಹಳ್ಳಿ ಬಳಿ ಗುರುತಿಸಿರುವ 9.50 ಎಕರೆ ಜಮೀನನ್ನು ಇಲಾಖೆಗೆ ಮಂಜೂರು ಮಾಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ ಎಂದು ಆರ್‌ಟಿಒ ಸಿ.ಎಸ್.ಪ್ರಮಥೇಶ್ ಹೇಳಿದರು.
---
ಜನರೇ ಮಾಯ!
ಸದಾ ಗಿಜಿಗುಡುತ್ತಿದ್ದ ಆರ್‌ಟಿಒ ಕಚೇರಿ ಆಯುಕ್ತರ ಭೇಟಿ ವೇಳೆ ಅತ್ಯಂತ ಪ್ರಶಾಂತವಾಗಿತ್ತು. ಯಾವುದೇ ವಿಭಾಗದಲ್ಲಿ ಕಚೇರಿ ನೌ ಕರರು, ಸೀಮಿತ ಸಂಖ್ಯೆಯಲ್ಲಿ ನಾಗರಿಕರು ಕಂಡು ಬಂದರೇ ಹೊರತು, ಮಧ್ಯವರ್ತಿಗಳು ಮಾಯವಾಗಿದ್ದರು. ಇದು ಆರ್‌ಟಿಒ ಕಚೇರಿಯೆ ಅಥವಾ ರಜೆ ಏನಾದರೂ ಇದೆಯೇ ಎಂಬ ಅಚ್ಚರಿ, ಅನುಮಾನ ಮೂಡಿಸುವಂತಿತ್ತು.