

ಜಮಖಂಡಿ: ವಾಹನ ಚಾಲನೆ ಮಾಡಲು ಚಾಲನಾ ಪ್ರಮಾಣ ಪತ್ರ ಹಾಗೂ ವಾಹನ ವಿಮೆ ಕಡ್ಡಾಯವಾಗಿ ಮಾಡಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ಚಾಲನಾ ಪ್ರಮಾಣ ಪತ್ರವನ್ನು ನವೀಕರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಆಶ್ರಯದಲ್ಲಿ ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮೋಟಾರು ವಾಹನ ಕಾಯ್ದೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಅರ್ಶದ ಎ. ಅನ್ಸಾರಿ ಮಾತನಾಡಿ, ಜವಾಬ್ದಾರಿ ಚಾಲಕರಾಗಿ ವಾಹನ ಓಡಿಸಬೇಕು. ಲೈಸೆನ್ಸ್‌ಯಿಲ್ಲದೆ ವಾಹನ ಚಾಲನೆ ಮಾಡಿದರೆ ರೂ. 1 ಸಾವಿರ, ದ್ವಿಚಕ್ರ ವಾಹನ ವಿಮೆ ಮಾಡಿಸಿರದಿದ್ದರೆ ರೂ. 1 ಸಾವಿರ ಹಾಗೂ ೋರ್ ವೀಲರ್ ವಾಹನಕ್ಕೆ ವಿಮೆ ಮಾಡಿಸಿರದಿದ್ದರೆ ರೂ. 5 ಸಾವಿರ ದಂಡ ತೆರಬೇಕಾಗುತ್ತದೆ ಎಂದರು.
ವಾಹನ ಮಾಲೀಕರು ತಮ್ಮ ವಾಹನವನ್ನು ಬೇರೆಯವರಿಗೆ ಕೊಟ್ಟಾಗ ಅಪಘಾತ ಸಂಭವಿಸಿದರೆ ರೂ. 25 ಸಾವಿರ ದಂಡ ತೆರಬೇಕಾಗುತ್ತದೆ. ವಾಹನದ ಮೂಲ ಮಾಲೀಕ ಸಹಿತ ದಂಡ ತೆರಬೇಕಾಗುತ್ತದೆ ಎಂದರು.
ವಕೀಲ ರಾಜೇಂದ್ರ ಕರೋಶಿ ಮಾತನಾಡಿ, ಬೇರೆಯವರ ವಾಹನವನ್ನು ಇನ್ನೊಬ್ಬರು ಓಡಿಸುವುದು ಅಪರಾಧ. ಬೇರೆಯವರ ವಾಹನವನ್ನು ಇನ್ನೊಬ್ಬರು ಓಡಿಸುವಾಗ ಅಪಘಾತ ಸಂಭವಿಸಿದರೆ ಅಪಘಾತ ಪಡಿಸಿದವನು ಆರೋಪಿ ಮಾತ್ರ ಆಗುತ್ತಾನೆ. ಆದರೆ, ವಾಹನದ ಮೂಲ ಮಾಲೀಕನೆ ಉಳಿದೆಲ್ಲದಕ್ಕೂ ನೇರ ಹೊಣೆಯಾಗುತ್ತಾನೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ಮಾತನಾಡಿ, ಕಾರ್ಮಿಕರು ಶ್ರಮಪಟ್ಟರೆ ಮಾತ್ರ ಇತರರು ಸುಖದಿಂದ ಜೀವನ ನಡೆಸಲು ಸಾಧ್ಯ. ಕಾರ್ಮಿಕರ ಜೀವನೋಪಾಯ ಸುಧಾರಿಸಲು ಹಾಗೂ ಆರ್ಥಿಕ ಭದ್ರತೆಯನ್ನು ಖಚಿತ ಪಡಿಸಲು ಕಾರ್ಮಿಕರಿಗಾಗಿ ಇರುವ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಕಾರ್ಮಿಕ ದಿನಾಚರಣೆ ಆಯೋಜಿಸಲಾಗುತ್ತದೆ ಎಂದರು.
ಸಾರಿಗೆ ಇಲಾಖೆಯ ವಾಹನ ಪರಿವೀಕ್ಷಕ ಎಸ್.ಆರ್. ಮರಲಿಂಗಣ್ಣವರ, ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಪಿ.ವಿ. ಮಾವರಕರ ಮಾತನಾಡಿದರು. ಪ್ರಾಚಾರ್ಯ ಡಾ.ಕೆ.ಡಿ. ಗೊಳಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಇದ್ದರು.
ತಾಲೂಕು ಕಾನೂನು ಸೇವಾ ಸಮಿತಿಯ ಸೂಚನೆಯ ಮೇರೆಗೆ ಸುಮಾರು 300 ವಿದ್ಯಾರ್ಥಿಗಳಿಗೆ ಕಲಿಕಾ ಚಾಲನಾ ಪ್ರಮಾಣ ಪತ್ರ ಕೊಡಿಸಲು ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಕಂಪ್ಯೂಟರ್ ಸೆಂಟರ್‌ನ ಹನಮಂತಪ್ಪ ಕಡಿವಾಲ, ಶಿವಾನಂದ ಕುಂಬಾರ, ಅಶೋಕ ಬಳಗಾರ, ಸಲೀಂ ಕೊರ್ತಿ, ಸೈಯ್ಯದ ಅಪರಾದ ಅವರನ್ನು ಸನ್ಮಾನಿಸಲಾಯಿತು. ಸುಶೀಲ ಹಳಗನ್ನವರ ಪ್ರಾರ್ಥಿಸಿದರು.