ಯಾವುದೇ ತೊಂದರೆ ಇಲ್ಲದೆ ಕಾರ್ಖಾನೆ ಆರಂಭ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Driving for sugarcane milling in the Mysugar factory Mandya
Published on

ಮಂಡ್ಯ: ಕಬ್ಬು ಬಾಕಿ ಹಣ ನೀಡಿ ಮೈಷುಗರ್ ಕಾರ್ಖಾನೆಯನ್ನು ಯಾವುದೇ ತೊಂದರೆ ಇಲ್ಲದೆ ಆರಂಭಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ 2024-25 ನೇ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷ ಸ್ವಲ್ಪ ಕಬ್ಬಿನ ಅಭಾವವಿರಬಹುದು. ಆದರೂ 2 ರಿಂದ 3 ಲಕ್ಷ ಟನ್ ಕಬ್ಬು ಅರೆಯುವ ಗುರಿಯಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದಿದ್ದರು. ಹಿಂದೆಲ್ಲ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಕೆಆರ್‌ಎಸ್ ಡ್ಯಾಂಗೆ ಬಾಗಿನ ಅರ್ಪಿಸುತ್ತಿದ್ದೆವು. ಆದರೆ ಈ ಬಾರಿ ಜುಲೈನಲ್ಲಿಯೇ ಬಾಗಿನ ನೀಡಿದ್ದೇವೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿದರೂ ಮೊಸರಲ್ಲಿ ಕಲ್ಲು ಹುಡುಕುವುದನ್ನು ಮಾಡಿ ಸುಳ್ಳುಗಳನ್ನೇ ಹೇಳಿಕೊಂಡು ನಮ್ಮನ್ನು ವಿರೋಧಿಸುವವರು ಇದ್ದಾರೆ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಟೀಕಿಸಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮೈಷುಗರ್ ಕಾರ್ಖಾನೆಯು ನಷ್ಟ ತುಂಬಿಸಿಕೊಂಡು ಲಾಭದ ಕಡೆ ಹೋಗುವ ಅವಕಾಶವಿದೆ. ಕಳೆದ ವರ್ಷ 2.40 ಲಕ್ಷ ಟನ್ ಕಬ್ಬು ಅರೆದಿರುವುದು ದಾಖಲೆಯಾಗಿದ್ದು, ಈ ಬಾರಿ ಮೈಷುಗರ್ ವ್ಯಾಪ್ತಿಯಲ್ಲಿ ಉತ್ತಮವಾಗಿ 3 ಲಕ್ಷ ಟನ್ ಕಬ್ಬು ನುರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಗೆ ಬಾಕಿ ಹಣ ಪಾವತಿ ಮಾಡಲಾಗಿದೆ. ಪ್ರಸ್ತುತದಲ್ಲಿ ಕಾರ್ಖಾನೆ ನುರಿಸುವ ಅಗತ್ಯ ಕಬ್ಬು ಸರಬರಾಜು ಆಗಲಿದೆ, ಕೋಜನ್, ಎಥೆನಾಲ್ ತಯಾರಿಸುವುದನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಖಾನೆ ಸ್ಥಾಪನೆ ಅವಶ್ಯವಿರುವುದರಿಂದ ರೈತರ ಹಿತದೃಷ್ಟಿಯಿಂದ ಅದರ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.
ಕಳೆದ ವರ್ಷ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಷುಗರ್ ಪುನಾರಂಭ ಮತ್ತು ಸಣ್ಣಪುಟ್ಟಣ ದುರಸ್ತಿ ಕಾರ್ಯ ಸೇರಿದಂತೆ ಇತ್ಯಾದಿಗೆ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಮುತುವರ್ಜಿಯಿಂದ ಅನುದಾನ ತರುವಲ್ಲಿ ಯಶಸ್ವಿಯಾದರು. ಅದೇ ರೀತಿ ಹೊಸ ಕಾರ್ಖಾನೆ ಆರಂಭಿಸಲು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಬರಗಾಲ ಎಲ್ಲ ಕಡೆಯೂ ಇಲ್ಲ. ಹಾಗಾಗಿ ಇದು ಕಬ್ಬು ಬೆಳೆಗೆ ಯಾವ ಪರಿಣಾಮವೂ ಬೀರಿಲ್ಲ. ಮೈಷುಗರ್ ವ್ಯಾಪ್ತಿಯಲ್ಲಿ 3 ಲಕ್ಷ ಟನ್ ಕಬ್ಬು ಅರೆಯಲು ಟಾರ್ಗೆಟ್ ಹೊಂದಿದ್ದೇವೆ. ಏಕೆಂದರೆ 2007ರ ನಂತರ ಕಾರ್ಖಾನೆ ಚೆನ್ನಾಗಿ ನಡೆಯುತ್ತಿತ್ತು. ಕಾಟಾಚಾರಕ್ಕೆ ಕಬ್ಬು ನುರಿಸಲು ಚಾಲನೆ ನೀಡಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಾಸಕರಾದ ರವಿಕುಮಾರ್ ಗಣಿಗ, ಕೆ.ಉದಯ್, ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಹೋರಾಟಗಾರರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಗುನ್ನಾಯಕನಹಳ್ಳಿ ಮುದ್ದೇಗೌಡ, ಜಯರಾಮ್, ನಾಗೇಂದ್ರ, ಕಮಲಾ ಇತರರಿದ್ದರು.

ಕಾರ್ಖಾನೆಗೆ ಎತ್ತಿನಗಾಡಿಯಲ್ಲಿ ಮೊದಲು ಕಬ್ಬು ತಂದಿದ್ದ ರೈತ ಮಂಡ್ಯ ತಾಲೂಕು ಸಾತನೂರು ಗ್ರಾಮದ ಎಚ್.ಸಿ.ಮಹದೇವ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಹುಮಾನ ನೀಡಿದರು. ಜತೆಗೆ ರೈತ ತಂದಿದ್ದ ಕಬ್ಬಿನ ಜಲ್ಲೆಯನ್ನು ಜಗಿದು ರುಚಿ ನೋಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net