

ಮಂಡ್ಯ: ಹಲವು ವರ್ಷಗಳಿಂದ ಹಾಳಾಗಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹಾಗೂ ತಾಲೂಕಿನ ದುದ್ದ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮ ಪರಿಮಿತಿಯ ರಸ್ತೆಗಳು ಅಭಿವೃದ್ಧಿಯ ಸ್ಪರ್ಶ ಸಿಗುವ ಸಮಯ ಸನ್ನಿಹಿತವಾಗಿದೆ. ಅದರಂತೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಮುಖಂಡ ರವಿ ಭೋಜೇಗೌಡ ದುರಸ್ತಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದರು.
ರಸ್ತೆಗಳು ಅಧ್ವಾನದ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು. ಸಮಸ್ಯೆ ಬಗೆಹರಿಸಿ ರಸ್ತೆ ಮಾಡಿಸಿಕೊಡಬೇಕೆನ್ನುವುದು ಈ ಭಾಗದ ಜನರ ಒತ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ರವಿ ಭೋಜೇಗೌಡ ಅವರು ರಸ್ತೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜತೆ ಸಮಾಲೋಚಿಸಿ ಅನುದಾನ ಲಭ್ಯವಾಗುವವರೆಗೂ ಗ್ರಾಮ ಪರಿಮಿತಿಯ ರಸ್ತೆಗಳಲ್ಲಿ ಜನರು ಓಡಾಡುವಂತೆ ಮಾಡಲು ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಯಿತು. ಮಾತ್ರವಲ್ಲದೆ ಅನುದಾನ ಬಂದ ಕೂಡಲೇ ಶಾಸಕರ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ರವಿ ಭೋಜೇಗೌಡ, ನನ್ನ ಹುಟ್ಟೂರಿನ ಜನರಿಗೆ ರಸ್ತೆಗಳಲ್ಲಿ ತಿರುಗಾಡಲು ಬಹಳ ಕಷ್ಟಕರವಾಗಿತ್ತು. ಈ ಸಂಬಂಧವಾಗಿ ದರ್ಶನ್ ಪುಟ್ಟಣ್ಣಯ್ಯ ಅವರ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗುವಂತೆ ಕಚ್ಚಾ ರಸ್ತೆಯನ್ನಾಗಿ ಮಾಡಲು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಧಿವೇಶನದ ನಂತರ ಶಾಸಕರನ್ನು ಗ್ರಾಮಕ್ಕೆ ಆಹ್ವಾನಿಸಿ ರಸ್ತೆಗಳ ದುರಸ್ತಿ ಹಾಗೂ ಗ್ರಾಮದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ರೈತ ಮುಖಂಡ ಮಹೇಂದ್ರ, ಗ್ರಾಮಸ್ಥ ನಿಂಗೇಗೌಡ, ಮುದಗಂದೂರು ಗ್ರಾಪಂ ಅಧ್ಯಕ್ಷ ನಾಗೇಶ್, ಮಹೇಂದ್ರ, ರಮೇಶ್‌ರಾಜು ಇತರರಿದ್ದರು.