ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚುವ ಪ್ರಶ್ನೆ ಇಲ್ಲ ಶಾಸಕ ರವಿಕುಮಾರ್ ಗಣಿಗ ಸ್ಪಷ್ಟನೆ

Driving development work in the university Mandya
Published on
ಮಂಡ್ಯ: ಯಾವುದೇ ಕಾರಣಕ್ಕೂ ಮಂಡ್ಯ ವಿಶ್ವವಿದ್ಯಾಲಯ ಮುಚ್ಚುವ ಪ್ರಶ್ನೆ ಇಲ್ಲ‌. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿ ಇರುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಹೆಬ್ಬಾಗಿಲು, ಆಂತರಿಕ ಸಂಪರ್ಕ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿ ಮಾತನಾಡಿದ ಅವರು,  ಮಂಡ್ಯ ವಿವಿ ವಿಲೀನಗೊಳಿಸುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಸ್ವಾಗತಾರ್ಹ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ವಿವಿ ಉಪ ಸಮಿತಿಯಿಂದ ಸಾಧಕ ಬಾಧಕ ಚರ್ಚೆಗಳು ನಡೆಯುತ್ತಿರುವಾಗಲೇ ಹಲವು ಪ್ರತಿಭಟನೆಗಳು ನಡೆದಿವೆ. ಯಾವುದೇ ಕಾರಣಕ್ಕೂ ವಿವಿಗಳನ್ನು ಮುಚ್ಚುವುದಿಲ್ಲ ಎಂಬುದನ್ನು ಸರ್ಕಾರ ಹೇಳಿದೆ. ಆದ್ದರಿಂದ ಆತಂಕ ಬೇಡ. ಮುಂದೆ ಒಂದು ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇವೆ ಎಂದು ಭರವಸೆ ನೀಡಿದರು.
ವಿರೋಧ ಪಕ್ಷಗಳು ಮಂಡ್ಯ ವಿವಿ ಸೇರಿದಂತೆ ರಾಜ್ಯದಲ್ಲಿ ಕೆಲವು ವಿವಿಗಳನ್ನು ಮುಚ್ಚುತ್ತಾರೆ ಎನ್ನುವ ಅಪಪ್ರಚಾರ ನಡೆಸಿದ್ದಾರೆ. ಆದರೆ ಸರ್ಕಾರ ವಿವಿ ಮುಚ್ಚುವ ಮಾತನ್ನು ಹೇಳಿಲ್ಲ. ವಿವಿಗಳ ಬಗ್ಗೆ ಚರ್ಚೆ ನಡೆಯುತ್ತಿವೆ ಅಷ್ಟೇ. ಮಂಡ್ಯ ವಿವಿಯನ್ನು ವಿಲೀನಗೊಳಿಸುವುದಿಲ್ಲ ಎಂಬುವ ಮಾತನ್ನು ಹೇಳಿದ್ದಾರೆ, ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮಂಡ್ಯ ವಿವಿ ಉಳಿವಿಗೆ ಒತ್ತಡ ಹೇರಿದ್ದೇನೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಮಂಡ್ಯ ವಿವಿಗೆ ಒತ್ತಡ ಹೇರಿದ್ದಾರೆ, ಅವರಿಗೂ ಧನ್ಯವಾದ ತಿಳಿಸುತ್ತೇನೆ. ಇದರ ಭಾಗವಾಗಿ ಜರ್ಮನ್‌ ಶೈಲಿಯಲ್ಲಿ ಮಂಡ್ಯ ವಿವಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು, ವಿವಿ ಆವರಣದಲ್ಲಿರುವ ಹೈಟೆನ್ಷನ್‌ ತಂತಿಯಿಂದಲೂ ತೊಂದರೆ ಆಗುತ್ತದೆ ಎಂಬುವ ಬಗ್ಗೆ ದೂರುಗಳು ಬಂದಿವೆ. ಇದರ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಮಂಡ್ಯ ವಿವಿ ಮುಚ್ಚಲಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದೇವು. ಆದರೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಕೂಡ ವಿವಿ ಮುಚ್ಚಬಾರದೆಂದು ಮಾತನಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿ ಕುಲಪತಿ ಪ್ರೊ.ಶಿವಚಿತ್ತಪ್ಪ, ಸಿಂಡಿಕೇಟ್‌ ಸದಸ್ಯ ನಾಗರಾಜು, ಕುಲಸಚಿವರಾದ ವೀಣಾ, ಯೋಗನರಸಿಂಹಸ್ವಾಮಿ, ಪ್ರಾಂಶುಪಾಲೆ ಸ್ವರ್ಣಾ, ನಗರಸಭೆ ಸದಸ್ಯರಾದ ಗೀತಾ ಕುಮಾರಸ್ವಾಮಿ, ಶಿವಪ್ರಕಾಶ್‌ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net