

ದೇವದುರ್ಗ: ಶಿಕ್ಷಣ ಮತ್ತು ಸಂಘಟನೆ ಅಭಿವೃದ್ಧಿಯ ಮೂಲಮಂತ್ರಿವಾಗಿದ್ದು ಆಟೋ ಚಾಲಕರು ಸಂಘಟಿತರಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವೆಂಕಟೇಶ ಮಡಿವಾಳ ಹೇಳಿದರು.
ಪಟ್ಟಣದ ಕೆಬಿಇ ರಸ್ತೆಯಲ್ಲಿನ ಚಾಲಕರ ಒಕ್ಕೂಟದ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಚಾಲಕರ ಸಮಾವೇಶ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಚಾಲಕರ ಮೇಲೆ ಪ್ರಯಾಣಿಕರು ನಂಬಿಕೆ ಇರಿಸಿಕೊಂಡು ಪ್ರಯಾಣ ಮಾಡುತ್ತಾರೆ. ಅಂಥವರ ಜೀವನದ ಜವಾಬ್ದಾರಿ ನಾವು ಹೊರಬೇಕು. ಹೀಗಾಗಿ ಚಾಲಕರು ದುಶ್ಚಟಗಳಿಂದ ದೂರವಿರಬೇಕು. ಮದ್ಯಪಾನ, ಗುಟ್ಕಾ, ತಂಬಾಕು ತ್ಯಜಿಸಬೇಕು. ದುಡಿಮೆ ಚಾಲಕರ ಮುಖ್ಯ ವೃತ್ತಿಯಾಗಬೇಕು. ಸಂಚಾರ ನಿಯಮ ಪಾಲನೆ ಮಾಡುವ ಮೂಲಕ ಜೀವ ಹಾಗೂ ಜೀವನ ಉಳಿಸಿಕೊಳ್ಳಬೇಕು. ಚಾಲಕ ವೃತ್ತಿಯ ಬಗ್ಗೆ ಗೌರವ ಹೊಂದುವ ಜತೆಗೆ ಇತರರಿಗೂ ಗೌರವ ನೀಡುವುದನ್ನು ಕಲಿಯಬೇಕು ಎಂದರು.