ಗುಂಡಿಗಳಲ್ಲಿ ಚಾಲಕರ ‘ಸರ್ಕಸ್’

webb 2
Published on

ಶಶಿ ಈಶ್ವರಮಂಗಲ

ಪುತ್ತೂರಿನಿಂದ ಸಂಟ್ಯಾರು ಮೂಲಕ ಪಾಣಾಜೆಗೆ ಹೋಗುವ ರಸ್ತೆಯ ಮಿನಿಪದವು ಎಂಬಲ್ಲಿಂದ ಪುತ್ತೂರಿನಿಂದ ಪರ್ಲಡ್ಕ ಮೂಲಕವಾಗಿ ಪಾಣಾಜೆಗೆ ಹಾದುಹೋಗುವ ರಸ್ತೆಯ ಕಾಪಿಕಾಡು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ನೇರ ಸಂಪರ್ಕ ರಸ್ತೆಯ ಕೆಲವೊಂದು ತಿರುವು ಭಾಗಗಳಲ್ಲಿ ಸೃಷ್ಟಿಯಾದ ಬೃಹತ್ ಹೊಂಡ- ಗುಂಡಿಗಳು ಅಪಾಯ ಆಹ್ವಾನಿಸುತ್ತಿವೆ.

ಒಳಮೊಗ್ರು ಗ್ರಾಮ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಕಿರಿದಾದ ರಸ್ತೆಯಾಗಿದ್ದರೂ ಬಹಳಷ್ಟು ಮಂದಿಗೆ ನೇರ ಪ್ರಯಾಣಕ್ಕೆ ಅನುಕೂಲಕರವಾದ ಸಂಪರ್ಕ ರಸ್ತೆ. ತಿರುವುಗಳಿಂದಲೇ ಕೂಡಿದ ಈ ರಸ್ತೆಯ ಕೆಲವೊಂದು ತಿರುವು ಭಾಗಗಳಲ್ಲಿ ಬೃಹತ್ ಹೊಂಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಉದ್ದಕ್ಕೂ ಬದಿಯಲ್ಲಿ ಪೊದೆಗಂಟಿಗಳು ಬೆಳೆದು ರಸ್ತೆಗೆ ಬಾಗಿದ್ದು, ಇದರಿಂದಾಗಿ ಕೆಲವು ಕಡೆಗಳಲ್ಲಿ ವಾಹನ ಸವಾರರಿಗೆ ರಸ್ತೆಯೇ ಕಾಣದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಡೆಗಳಲ್ಲಿಯೇ ಉಂಟಾಗಿರುವ ಬೃಹತ್ ಹೊಂಡ ಗುಂಡಿಗಳಲ್ಲಿ ಮಳೆನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಬದಿನಾರು ಎಂಬಲ್ಲಿನ ತಿರುವು ರಸ್ತೆ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಿ ನಿರ್ಮಾಣಗೊಂಡಿರುವ ಹೊಂಡಗಳಲ್ಲಿ ಮಳೆನೀರು ತುಂಬಿಕೊಂಡು ಕೆರೆಯಂತೆ ಕಾಣುತ್ತಿದೆ. ಸಂಪೂರ್ಣವಾಗಿ ರಸ್ತೆ ಹದಗೆಟ್ಟಿರುವ ಬದಿನಾರು, ಮೂಲೆ, ಬೈರೋಡಿ ತಿರುವು ರಸ್ತೆ ಭಾಗಗಳಲ್ಲಿ ನಿರ್ಮಾಣಗೊಂಡಿರುವ ಹೊಂಡಗುಂಡಿಗಳಲ್ಲಿ ವಾಹನ ಸವಾರರು ಜೀವ ಭಯದೊಂದಿಗೆ ‘ಸರ್ಕಸ್’ ಸವಾರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ರಸ್ತೆ ಪಿಎಂಜಿಎಸ್‌ವೈ ಇಲಾಖೆಗೆ ಸೇರಿದ್ದೆಂದು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಈ ರಸ್ತೆಯನ್ನು 5 ವರ್ಷಗಳ ಕಾಲ ನಿರ್ವಹಣೆ ಮಾಡಿ ವರ್ಷದ ಹಿಂದೆಯೇ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಪಿಎಂಜಿಎಸ್‌ವೈ ಇಲಾಖೆಯವರು ಹೇಳುತ್ತಿದ್ದಾರೆ. ಹಾಗಾಗಿ ನಿರ್ವಹಣೆ ಮಾಡಬೇಕಾದವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಮರಳು ಮಾಫಿಯಾ ಕಳ್ಳದಾರಿ: ವಿಟ್ಲ ಕಡೆಯ ಜಲ್ಲಿಕಲ್ಲಿನ ಕ್ವಾರಿಗಳಿಂದ ಈ ರಸ್ತೆಯಾಗಿಯೇ ಸುಳ್ಯ ಕಡೆಗೆ ಜಲ್ಲಿ ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಮರಳು ಸಾಗಾಟಗಾರರು ಈ ರಸ್ತೆಯನ್ನೇ ಬಳಸುತ್ತಿದ್ದಾರೆ. ಕೆಂಪು ಕಲ್ಲು ಸಾಗಾಟವೂ ನಿರಂತರವಾಗಿ ನಡೆಯುತ್ತಿದೆ. ಪುತ್ತೂರು ನಗರದಲ್ಲಿ ಮತ್ತು ಸಂಪ್ಯದಲ್ಲಿ ಪೊಲೀಸ್ ಠಾಣೆ ಇರುವುದರಿಂದ ಪೊಲೀಸರ ಕಣ್ತಪ್ಪಿಸಲು ಈ ರಸ್ತೆಯನ್ನು ಕಳ್ಳದಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಲೋಡ್‌ಗಟ್ಟಲೆ ಭಾರ ಹೇರಿಕೊಂಡು ಸಾಗುವ ಲಾರಿ ಮತ್ತು ಟಿಪ್ಪರ್‌ಗಳ ಸಂಚಾರದಿಂದಾಗಿಯೇ ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆ ಹದಗೆಡುತ್ತಿದೆ ಎಂಬುವುದು ಸ್ಥಳೀಯರ ಆರೋಪ.

5 ವರ್ಷಗಳ ಹಿಂದೆ ಈ ರಸ್ತೆಯ ಅಭಿವೃದ್ಧಿ ಕಾರ್ಯ ನಡೆದಿತ್ತು. ಕಾಮಗಾರಿ ಗುತ್ತಿಗೆದಾರರು ಉತ್ತಮ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿದ್ದರು. ಆದರೆ ಅಧಿಕ ಹೊರೆ ಹೇರಿಕೊಂಡು ಸಂಚರಿಸುತ್ತಿರುವ ಜಲ್ಲಿಕಲ್ಲು ಮತ್ತು ಕೆಂಪು ಕಲ್ಲು ಸಾಗಾಟದ ಲಾರಿಗಳಿಂದಾಗಿ ಪ್ರತೀ ವರ್ಷವೂ ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳಾಗುತ್ತಿವೆ. ಇದರಿಂದಾಗಿ ಈ ಭಾಗದ ಗ್ರಾಮಸ್ಥರು ಹಾಗೂ ಈ ರಸ್ತೆಯನ್ನು ಅವಲಂಬಿಸಿಕೊಂಡಿರುವ ಜನರು ಪ್ರತಿ ವರ್ಷ ಮಳೆಗಾಲದಲ್ಲಿ ಸಮಸ್ಯೆಗೊಳಗಾಗಬೇಕಾಗಿದೆ.- ವಿಜೇಶ್ ರೈ ಬಿಲ್ಲಾಜೆ, ಗ್ರಾಮಸ್ಥರು ಪಿಎಂಜಿಎಸ್‌ವೈ ಯೋಜನೆಯಡಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, 5 ವರ್ಷಗಳ ಕಾಲ ಇಲಾಖೆ ವತಿಯಿಂದ ನಿರ್ವಹಣೆ ಮಾಡಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹಾಗಾಗಿ ಈ ರಸ್ತೆ ನಮ್ಮ ಇಲಾಖೆ ಅಧೀನದಲ್ಲಿಲ್ಲ.- ಜನಾರ್ದನ್, ಪಿಎಂಜಿಎಸ್‌ವೈ ಇಲಾಖೆ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net