ಹಣಕಾಸು ಸಂಸ್ಥೆಗಳ ಧೋರಣೆಗೆ ಚಾಲಕರ ಕಿಡಿ ; ಕಂತು ಪಾವತಿಸದ ಆಟೋ ವಶಕ್ಕೆ ಪಡೆಯುತ್ತಿರುವುದಕ್ಕೆ ಖಂಡನೆ

Auto protest
Published on

ತುಮಕೂರು: ಕರೊನಾ ಹಿನ್ನೆಲೆಯಲ್ಲಿ ಆಟೋ ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಕಂತು ಪಾವತಿಸದ ಆಟೋ ವಶಕ್ಕೆ ಪಡೆಯುತ್ತಿರುವುದನ್ನು ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದರು.

ನಗರದ ಬಿಜಿಎಸ್ ವೃತ್ತದ ದರ್ಗಾ ಸಮೀಪದ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಒಂದೆಡೆ ಸೇರಿ ಖಾಸಗಿ ಹಣಕಾಸು ಸಂಸ್ಥೆಗಳ ಧೋರಣೆ ಖಂಡಿಸಿ, ಸಾಲದ ಕಂತು ಕಟ್ಟಲು ಆರು ತಿಂಗಳ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಜ್‌ಗರ್ ಪಾಷ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಎಂಟು ಸಾವಿರ ಆಟೋ ಚಾಲಕರಿದ್ದು, ನಮ್ಮ ಕುಟುಂಬದ ಜೀವನ ಆಟೋ ಚಾಲನೆ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಆಟೋದಲ್ಲಿ ಓಡಾಡುವವರೇ ಇಲ್ಲವಾಗಿದ್ದು ಜೀವನ ಕಷ್ಟವಾಗಿದೆ ಎಂದರು.

ಆಟೋ ಚಾಲಕರಿಗೆ ಯಾವುದೇ ವಿಶೇಷ ಸರ್ಕಾರಿ ಅನುದಾನಗಳಿಲ್ಲ, ಶೇ.80 ಆಟೋ ಚಾಲಕರು ಮತ್ತು ಮಾಲೀಕರು ಆಟೋಗಳನ್ನು ಬ್ಯಾಂಕುಗಳ ಆರ್ಥಿಕ ಸಹಾಯದ ಮೇಲೆ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಮೂಲಕ ಹೆಚ್ಚಿನ ಬಡ್ಡಿ ದರಕ್ಕೆ ಕಂತುಗಳ ಮೂಲಕ ಆಟೋಗಳನ್ನು ಖರೀದಿಸಿದ್ದು ಈಗ ಅದನ್ನು ಕಿತ್ತುಕೊಂಡರೆ ನಮ್ಮ ಬದುಕೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ಮಧ್ಯ ಪ್ರವೇಶಿಸಲಿ: ಮಹಿಳಾ ಸ್ವಸಹಾಯ ಸಂಘದ ಅಧಿಕಾರಿಗಳು ಸಾಲ ಮರುಪಾವತಿಗಾಗಿ ಆಟೋ ಚಾಲಕರ ಪತ್ನಿಯರ ಮೇಲೆ ಮರುಪಾವತಿಗಾಗಿ ಒತ್ತಡ ಹೇರುತ್ತಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕರ ಜೀವನ ಬೀದಿಗೆ ಬಿದ್ದಿದೆ. ಹಣಕಟ್ಟಲೇ ಬೇಕು ಎಂದು ದೌರ್ಜನ್ಯ ಎಸಗುತ್ತಿದ್ದಾರೆ. ಆದ್ದರಿಂದ ರಾಷ್ಟ್ರೀಯ ಬ್ಯಾಂಕ್, ಹಣಕಾಸು ಸಂಸ್ಥೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ವಾಹನದ ಮೇಲೆ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸಲು ಒತ್ತಡ ಹಾಕದಂತೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅಜ್‌ಗರ್ ಪಾಷ ಆಗ್ರಹಿಸಿದರು. ಆಟೋ ಚಾಲಕರಾದ ಗೌಸ್, ಮುಸ್ತಫಾ, ಕಾರ್ತೀಕ್, ಮಹಮ್ಮದ್ ಜಮೀಲ್, ಅಲ್ಲಾಬಕಾಶ್, ಸುಹೈಲ್ ಪಾಷ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net