

ಬೇಲೂರು: ರಸ್ತೆ ಸುರಕ್ಷತೆ ಬಗ್ಗೆ ಎಷ್ಟೇ ತಿಳಿದಿದ್ದರೂ ವಾಹನ ಚಾಲಕರು ಹಾಗೂ ಸವಾರರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಬೇಲೂರು ಪೊಲೀಸ್ ಠಾಣೆ ಪಿಎಸ್‌ಐ ಶಿವಾನಂದ ಜಿ.ಪಾಟೀಲ್ ಹೇಳಿದರು.
ಪಟ್ಟಣದ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮೌಂಟ್ ಕಾರ್ಮೆಲ್ ಶಾಲೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ರಸ್ತೆ ಸುರಕ್ಷತಾ ಸಾಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಸಣ್ಣ, ಪುಟ್ಟ ತಪ್ಪಿನಿಂದಾಗಿ ಜೀವ ಹಾನಿಯಾಗುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳು ಬೈಕ್‌ನಲ್ಲಿ ತೆರಳುವ ಸಂದರ್ಭ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪಾಲಕರು ತಿಳಿಸಬೇಕು. ದಾಖಲಾತಿ ಸರಿಯಾಗಿ ಇಟ್ಟುಕೊಂಡು ಚಾಲನೆ ಮಾಡಬೇಕು. 18 ವರ್ಷ ಒಳಪಟ್ಟವರಿಗೆ ವಾಹನಗಳನ್ನು ಕೊಡಬಾರದು. ಅಲ್ಲದೆ ಪೊಲೀಸ್ ಇಲಾಖೆಯ ಸುತ್ತೋಲೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಸರಿಯಾಗಿ ಅರಿವು ಇಟ್ಟುಕೊಂಡು ವಾಹನ ಚಲಾಯಿಸಬೇಕು. ಇದರಿಂದ ನಿತ್ಯ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕೆಂಬ ಹಿನ್ನೆಲೆಯಲ್ಲಿ ಪ್ರತಿವರ್ಷ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಮಾತನಾಡಿ, ನಿತ್ಯ ಅಪಘಾತಗಳು ಸಂಭವಿಸಿ ಸಾವು-ನೋವುಗಳ ಬಗ್ಗೆ ನೋಡುತ್ತಿದ್ದೇವೆ. ಜಾಗೃತಿ ಮೂಡಿಸಿದರೂ ತಡೆಗಟ್ಟಲು ಆಗುತ್ತಿಲ್ಲ. ಲಕ್ಷಾಂತರ ರೂ. ಕೊಟ್ಟು ದ್ವಿಚಕ್ರ ವಾಹನ ಖರೀದಿಸುತ್ತೇವೆ. ಜೀವಕ್ಕೆ ಅಮೂಲ್ಯವಾದ ಹೆಲ್ಮೆಟ್ ಬಳಸಲು ಹಿಂದೆ-ಮುಂದೆ ನೋಡುತ್ತೇವೆ. ಜತೆಗೆ ಕಾರಿನಲ್ಲಿ ಹೋಗುವವರು ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸುವಂತೆ ಮನವಿ ಮಾಡಿದರು. ಸಾರ್ವಜನಿಕರಲ್ಲಿ ಸಂಚಾರ ನಿಯಮದ ಬಗ್ಗೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಿದರು.
ಎಎಸ್‌ಐ ಚಂದ್ರಶೇಖರ್, ಕಾನ್‌ಸ್ಟೆಬಲ್ ದೇವರಾಜು, ಶಿಕ್ಷಕರಾದ ಸಂದೀಪ್, ಕಾಂತಮಣಿ, ದಾಕ್ಷಾಯಿಣಿ. ಮಾನಸಾ ಇತರರು ಇದ್ದರು.