ಬರಲಿದೆ ಚಾಲಕರಹಿತ ಮೆಟ್ರೋ ರೈಲು!

Namma Metro
Published on

ಬೆಂಗಳೂರು: ಆರ್​.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸಂಚಾರ ನಡೆಸಲಿರುವ ನಮ್ಮ ಮೆಟ್ರೋ ಚಾಲಕರಹಿತ ರೈಲುಗಳು ಅಕ್ಟೋಬರ್​ನಲ್ಲಿ ಚೀನಾದಿಂದ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ.

ಹಳದಿ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಸಂಚರಿಸಲಿದ್ದು, ಇದರ ಭಾಗವಾಗಿ ಚೀನಾ ರೈಲ್ವೇ ರೋಲಿಂಗ್​ ಸ್ಟಾಕ್​ ಕಾರ್ಪೊರೇಶನ್​ ಬೋಗಿ ಪೂರೈಕೆ ಟೆಂಡರ್​ ಪಡೆದುಕೊಂಡಿದೆ. ಅಕ್ಟೋಬರ್​ನಲ್ಲಿ 12 ಬೋಗಿಗಳನ್ನು ಒಳಗೊಂಡಿರುವ ಎರಡು ರೈಲು ಆಗಮಿಸಲಿವೆ. ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮದ ಕೆಲ ಅಧಿಕಾರಿಗಳು ಚೀನಾಕ್ಕೆ ತೆರಳಿ ನಿರ್ಮಾಣ ಹಂತದಲ್ಲಿರುವ ಬೋಗಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.

ಸಿವಿಲ್​ ಕಾಮಗಾರಿ ಬಹುತೇಕ ಪೂರ್ಣ

ಆರ್​.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ 19.1 ಕಿ.ಮೀ. ರೈಲು ಮಾರ್ಗದಲ್ಲಿ ಸಿವಿಲ್​ ಕಾಮಗಾರಿಗಳು ಬಹುತೇಕ ಮುಕ್ತಾಯವಾಗಿದೆ. ಸಿಗ್ನಲಿಂಗ್​ ಕೆಲಸಗಳು ಮುಗಿಯುತ್ತಿದ್ದಂತೆ, ದೆಹಲಿಯಿಂದ ಮೆಟ್ರೋ ರೈಲ್ವೆ ಸುರಕ್ಷತಾ ಆಯೋಗ ಆಗಮಿಸಿ ತಪಾಸಣೆ ನಡೆಸಲಿದೆ. ಹೀಗಾಗಿ ಮುಂದಿನ ಅಕ್ಟೋಬರ್​-ನವೆಂಬರ್​ನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

ಹಳದಿ ಮಾರ್ಗದ ಹೈಲೈಟ್ಸ್​
* ಯೋಜನಾ ವೆಚ್ಚ: ಅಂದಾಜು 798 ಕೋಟಿ ರೂ.
* ಮಾರ್ಗದ ಒಟ್ಟು ಉದ್ದ: 19.1 ಕಿ.ಮೀ.
* ಒಟ್ಟು ನಿಲ್ದಾಣಗಳು 16: ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ, ಸೆಂಟ್ರಲ್​ ಸಿಲ್ಕ್​ಬೋರ್ಡ್​, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು ಗೇಟ್​, ಸಿಂಗಸಂದ್ರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್​ ಸಿಟಿ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net