

ಯಲ್ಲಾಪುರ: ಟ್ಯಾಂಕರ್ ಲಾರಿ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ತಮಿಳುನಾಡು ತಿರುಕೊಳ್ಳೂರಿನ ಅಯೂಬ್ ಖಾನ್ ಎಸ್.ಎಂ (63) ಮೃತ ಚಾಲಕ. ತಮಿಳುನಾಡು ಮೂಲದ ಟ್ಯಾಂಕರ್ ಲಾರಿ ಗ್ಯಾಸ್ ತುಂಬಿಕೊಂಡು ಹೋಗುವಾಗ ಅರಬೈಲ್ ಘಟ್ಟದಲ್ಲಿ ಏಕಾಏಕಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ.
ಲಾರಿ ಚಲಿಸುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಇದರಿಂದ ನಿಯಂತ್ರಣ ಕಳೆದುಕೊಂಡ ಲಾರಿ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನ ಮೃತದೇಹ ಹೊರ ತೆಗೆದರು. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಅಪಘಾತಗೊಂಡ ಲಾರಿ ತೆರವುಗೊಳಿಸಲು ಪೊಲೀಸರು ಕ್ರಮ ಕೈಗೊಂಡು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.