

ಶ್ರೀರಂಗಪಟ್ಟಣ: ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹಳ್ಳಕ್ಕೆ ಉರುಳಿ ಬಿದ್ದು ಓಮ್ನಿಯೊಳಗೆ ಸಿಲುಕಿ ಗಾಯಗೊಂಡು ನರಳುತ್ತಿದ್ದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿ ಅಗ್ನಿಶಾಮಕ ಠಾಣೆ ಮುಂಭಾಗದ ಜಮೀನಿನಲ್ಲಿ ಶನಿವಾರ ಮಧ್ಯರಾತ್ರಿ ಅಪಘಾತ ನಡೆದಿದ್ದು, ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ಧನಂಜಯ(50) ಗಂಭೀರವಾಗಿ ಗಾಯಗೊಂಡಿದ್ದ ಚಾಲಕ.
ಶನಿವಾರ ತಡರಾತ್ರಿ ಕಿಕ್ಕೇರಿಯಿಂದ ಮೈಸೂರು ಕಡೆಗೆ ಹೊರಟಿದ್ದು, ಮಾರ್ಗಮಧ್ಯೆ ಶ್ರೀರಂಗಪಟ್ಟಣದಲ್ಲಿ ಸಾಗುತ್ತಿದ್ದ ವೇಳೆ ಎದುರಿನಿಂದ ಮತ್ತೊಂದು ವಾಹನ ಬಂದ ಕಾರಣ ಗಾಬರಿಯಿಂದ ನಿಯಂತ್ರಿಸಲಾಗದೆ ಹೆದ್ದಾರಿ ಪಕ್ಕದಲ್ಲಿದ್ದ ಹಳ್ಳದ ಜಮೀನಿನೊಳಗೆ ನುಗ್ಗಿ ಉರುಳಿ ಬಿದ್ದಿದೆ.
ಓಮ್ನಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಧನಂಜಯ ಅವರ ಎರಡು ಕಾಲುಗಳು ಸ್ಟೇರಿಂಗ್ ನಡುವೆ ಸಿಲುಕಿ ಮೇಲೇಳಲಾಗದೆ ಗಂಭೀರವಾಗಿ ಗಾಯಗೊಂಡು ಸಹಾಯಕ್ಕಾಗಿ ರಾತ್ರಿ 3ರ ವೇಳೆ ಚೀರಾಡಿದ್ದಾರೆ. ಅಪಘಾತ ಯಾರ ಗಮನಕ್ಕೂ ಬಾರದ ಹಿನ್ನೆಲೆಯಲ್ಲಿ ರಕ್ತದ ಮಡುವಿನಲ್ಲೇ ನರಳಿದ್ದಾರೆ. ಮುಂಜಾನೆ ಪಾದಾಚಾರಿ ಮಾಹಿತಿ ಮೇರೆಗೆ ಸ್ಥಳ ಪರಿಶೀಲಿಸಿದ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ ಹಾಗೂ ಸಿಬ್ಬಂದಿ ತೇಜೋಮೂರ್ತಿ, ಪರಮೇಶ್, ಅನಂತ, ಶ್ರೀಶೈಲಾ, ಶಿವು ಹಾಗೂ ನೂರ್ ಸಾಬ್ ಅವರು ರಕ್ಷಣಾ ಯಂತ್ರಗಳ ಸಹಾಯದಿಂದ ಸುಮಾರು ಅರ್ಧ ತಾಸು ಕಾರ್ಯಚರಣೆ ನಡೆಸಿ ಒಳಗೆ ಸಿಲುಕಿದ್ದ ಗಾಯಾಳು ಧನಂಜಯನನ್ನು ಸುರಕ್ಷಿತವಾಗಿ ಹೊರತೆಗೆದು, ಆಸ್ಪತ್ರೆಗೆ ದಾಖಲಿಸಿದರು. ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.