ಕಾರುಗಳ ನಡವೆ ಅಪಘಾತ ಸಂಭವಿಸಿ ಚಾಲಕ ಸಾವು

SRP_02-01(b)jpj
Published on

ಶ್ರೀರಂಗಪಟ್ಟಣ: ತಾಲೂಕಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಪುಟ್ಟರಾಜು ಎಂಬುವರ ಪುತ್ರ ಮದನ್ ಕುಮಾರ್(29) ಮೃತರು. ಮತ್ತೊಂದು ಕಾರಿನಲ್ಲಿದ್ದ ಬೆಂಗಳೂರಿನ ವಿಜಯ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮ ಹಾಗೂ ಕರೀಘಟ್ಟ ನಡುವಿನ ಬೆಂ-ಮೈ ಎಕ್ಸ್‌ಪ್ರೆಸ್ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದೆ.

ಈತ ಬೆಂಗಳೂರಿನಲ್ಲಿ ಬಾಡಿಗೆ ಕಾರು ಚಾಲಕನಾಗಿದ್ದ. ಸೋಮವಾರ ತನ್ನ ಸ್ವಗ್ರಾಮ ಯಲಿಯೂರಿಗೆ ಆಗಮಿಸಿದ ಬಳಿಕ ತನ್ನ ತಂದೆ-ತಾಯಿ ಮೈಸೂರಿನಲ್ಲಿರುವ ವಿಚಾರ ತಿಳಿದು ಮೈಸೂರಿಗೆ ತನ್ನ ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ಮಾರ್ಗಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಹಾರಿ ಮತ್ತೊಂದು ಪಥದಲ್ಲಿ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಮತ್ತೊಂದು ಕಾರಿನಲ್ಲಿದ್ದ ಬೆಂಗಳೂರಿನ ವಿಜಯ್‌ಕುಮಾರ್ ಎಂಬಾತ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿ, ಬಲಗೈ ಮತ್ತು ತೋಳಿಗೆ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net