ಬಸ್‌ಗೆ ಕಾರು ಡಿಕ್ಕಿಯಾಗಿ ಚಾಲಕ ಸಾವು

8-kglphoto-4
Published on

ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಸಮೀಪ ತಮಿಳುನಾಡಿನ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಮನಗರ ಜಿಲ್ಲೆಯ ಬಿಡದಿ ತಾಲೂಕು ಅಬ್ಬನಕೊಪ್ಪಲು ಕಾಲನಿ ನಿವಾಸಿ ಕುಮಾರ (39) ಮೃತ. ಶುಕ್ರವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಕಡೆಗೆ ಕಾರು ಬರುತ್ತಿದ್ದ ವೇಳೆ ಕಾಮಗೆರೆ ಗ್ರಾಮದ ಸಮೀಪ ಮುಂದೆ ತೆರಳುತ್ತಿದ್ದ ತಮಿಳುನಾಡಿನ ಸಾರಿಗೆ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ, ಬಸ್‌ಗೆ ಕಾರು ಡಿಕ್ಕಿ ಹೊಡೆದಿದ್ದು. ಕಾರಿನಲ್ಲಿ ಪಯಾಣಿಸುತ್ತಿದ್ದ ನಾಲ್ವರ ಪೈಕಿ ಚಾಲಕ ಕುಮಾರ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಶವವನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net