

ಹುಬ್ಬಳ್ಳಿ: ನಗರ ಹೊರವಲಯದ ಗದಗ ರಸ್ತೆಯ ರಿಂಗ್ ರೋಡ್ ಬಳಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಾಲಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಚಾಲಕ ರಫೀಕ್ ನದಾಫ್(34) ಮೃತ ದುರ್ದೈವಿ.
ಲಾರಿಯೊಂದರ ದಾಖಲಾತಿಗಳನ್ನು ನೋಡಲು ವಾಹನ ನಿಲ್ಲಿಸಿದ್ದ. ಮುಂದೆ ನಿಂತಿದ್ದ ಲಾರಿಯ ಚಾಲಕನ ಬಳಿ ದಾಖಲಾತಿಗಳನ್ನು ಪಡೆಯಲು ಚಾಲಕ ರಫೀಕ್ ನದಾಫ್ ಕೆಳಗಿಳಿದಿದ್ದ. ಇದೇ ವೇಳೆ ಲಾರಿಯೊಂದು, ವಾಣಿಜ್ಯ ತೆರಿಗೆ ಇಲಾಖೆಯ ಟಾಟಾ ಸುಮೋಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮುಂದೆ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ವಾಹನದಿಂದ ಕೆಳಗೆ ನಿಂತಿದ್ದ ರಫೀಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಾಹನದೊಳಗಿದ್ದ ಸಹಾಯಕ ಆಯುಕ್ತ ಶ್ರೀಶೈಲ ದೊಡ್ಡಮನಿ, ಇನ್ಸ್ಪೆಕ್ಟರ್ ಈಶ್ವರ ಸುಧೆ ಪಾರಾಗಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.