ಬೈಕ್ ಸವಾರನಿಂದ ಚಾಲಕನಿಗೆ ಥಳಿತ

Bus (1)
Published on

ನರಗುಂದ: ತಾಲೂಕಿನ ಹಿರೇಕೊಪ್ಪದಲ್ಲಿ ಸಾರಿಗೆ ಸಂಸ್ಥೆಯ ಬಸ್ ಚಾಲಕ- ಬೈಕ್ ಸವಾರನ ನಡುವೆ ಮಾರಾಮಾರಿ ನಡೆದು ಸವಾರ ಚಾಲಕನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ.

ಇದರಿಂದ ತೀವ್ರ ಮನನೊಂದ ಬಸ್ ಚಾಲಕ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಳಿಯಪ್ಪ ಕಟಗಿ ಅವರನ್ನು ಬಂಧಿಸಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಿದ್ದೇನು?: ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕಿನ ಅರಿಷಿಣಗೋಡಿ, ಹಿರೇಕೊಪ್ಪ ಮಾರ್ಗವಾಗಿ ರಾಮದುರ್ಗ ತಾಲೂಕಿನ ಚಿಕ್ಕೊಪ್ಪಕ್ಕೆ ನಿತ್ಯ ಬಸ್‌ಗಳು ಸಂಚರಿಸುತ್ತವೆ. ಶನಿವಾರ ಮಧ್ಯಾಹ್ನ ನರಗುಂದದಿಂದ ಚಿಕ್ಕೊಪ್ಪಕ್ಕೆ ತೆರಳುತ್ತಿದ್ದ ಬಸ್ ಎಂದಿನಂತೆ ಹಿರೇಕೊಪ್ಪ ಗ್ರಾಮದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲು ಬಸ್ ನಿಲುಗಡೆ ಮಾಡಬೇಕಿತ್ತು. ಆದರೆ, ಬಸ್ ನಿಲುಗಡೆ ಮಾಡಬೇಕಿದ್ದ ಸ್ಥಳದಲ್ಲಿ ಬೈಕ್ ಸವಾರ ನಿಂತಿದ್ದ. ಈ ವೇಳೆ ಬಸ್ ಚಾಲಕ ರಮೇಶಗೌಡ ಶಂಕರಗೌಡ ಭರಮಗೌಡ್ರ ಬೈಕ್ ಸವಾರ ಮಳಿಯಪ್ಪ ಶಿವಾನಂದ ಕಟಗಿ ಅವರಿಗೆ ರಸ್ತೆ ಪಕ್ಕಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ. ಏಕಾಏಕಿ ಆಕ್ರೋಶಗೊಂಡ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಮವಸ್ತ್ರ ಹಿಡಿದು ಎಳೆದಾಡಿದ್ದಾನೆ. ಅಲ್ಲದೇ ಬಸ್ ಚಾಲಕನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಘಟನೆಯಲ್ಲಿ ಚಾಲಕನ ಹೊಟ್ಟೆ, ಹಲ್ಲು, ಕಿವಿ, ಬಾಯಿ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ.

ಆರೋಪಿ ಕ್ಷಮೆಯಾಚಿಸಬೇಕು. ಇನ್ಮುಂದೆ ಯಾವುದೇ ಹಲ್ಲೆ, ಗಲಾಟೆ ಆಗದಂತೆ ಗುರು-ಹಿರಿಯರು ನೋಡಿಕೊಳ್ಳಬೇಕು ಎಂದು ಸಾರಿಗೆ ಸಿಬ್ಬಂದಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net