ಬಾಡಿಗೆಗೆ 75 ಕಾರು, 2 ಬೈಕ್ ಪಡೆದು ಮೋಸ

Driven by you
Published on

ಬೆಂಗಳೂರು: ಆನ್​ಲೈನ್​ನಲ್ಲಿ ವಾಹನ ಬಾಡಿಗೆ ನೀಡುವ ಕಂಪನಿಯಲ್ಲಿ ಹಂತ ಹಂತವಾಗಿ 75 ಕಾರು ಮತ್ತು 2 ಬೈಕ್ ಪಡೆದು ಬಾಡಿಗೆ ಹಣವನ್ನೂ ಕೊಡದೆ, ವಾಹನಗಳನ್ನೂ ಹಿಂದಿರುಗಿಸದೆ ವಂಚನೆ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.

ಡ್ರೈವನ್ ಬೈ ಯೂ ಮೊಬಿಲಿಟಿ ಪ್ರೈ.ಲಿ. ಕಂಪನಿ ವ್ಯವಸ್ಥಾಪಕ ಮಹಮ್ಮದ್ ರಫೀ ಮೋಸ ಹೋಗಿದ್ದು, ಈ ಬಗ್ಗೆ ಆರೋಪಿ ಹುಸೇನ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಡ್ರೈವನ್ ಕಂಪನಿ ಮೂಲಕ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ನೀಡುವ ವ್ಯವಹಾರ ನಡೆಸಲಾಗುತ್ತಿದೆ. ಆರೋಪಿ ಹುಸೇನ್ ತಾನು ರಹಿಪ್ಸ್ ಡ್ರೈವ್ ಇಂಡಿಯಾ ಪ್ರೈ.ಲಿ. ಎಂಬ ಕಂಪನಿ ನಡೆಸುತ್ತಿದ್ದೇನೆ. ನಮ್ಮ ಕಂಪನಿಗೆ ಬಾಡಿಗೆ ಕಾರು ಮತ್ತು ದ್ವಿಚಕ್ರ ವಾಹನಗಳು ಬೇಕಾಗಿದೆ ಎಂದು ಕೇಳಿದ್ದ. ಅದಕ್ಕೆ ಒಪ್ಪಿದಾಗ ಡ್ರೈವನ್ ಕಂಪನಿಯಿಂದ 2019ರ ಏ. 22 ರಿಂದ 2020ರ ಏ.5 ರವರೆಗೆ ಬೇರೆ ಬೇರೆ ದಿನಾಂಕದಲ್ಲಿ ಒಟ್ಟು 75 ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ತಿಂಗಳ ಬಾಡಿಗೆ ನೆಪದಲ್ಲಿ ಪಡೆದುಕೊಂಡಿದ್ದಾನೆ. ಫೆಬ್ರವರಿಯಲ್ಲಿ ಬಾಡಿಗೆ ಹಣ ಕೊಡದಿದ್ದಾಗ ಹುಸೇನ್​ನನ್ನು ಸಂಪರ್ಕ ಮಾಡಿ ವಾಹನ ಅಥವಾ ಬಾಡಿಗೆ ಹಣ ಕೊಡುವಂತೆ ತಾಕೀತು ಮಾಡಿದೆ.

ನಂತರ ಆರೋಪಿ ಮೊಬೈಲ್ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ಬಾಡಿಗೆ ಹಣವೂ ಕೊಡದೆ ಕಾರು, ಬೈಕ್ ಕೊಡದೆ ಮೋಸ ಮಾಡಿದ್ದಾನೆ. ಆರೋಪಿಯಿಂದ ವಾಹನ ಮತ್ತು ಬಾಡಿಗೆ ಹಣ ಕೊಡಿಸಬೇಕೆಂದು ದೂರಿನಲ್ಲಿ ರಫೀ ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವುದಾಗಿ ಅಶೋಕನಗರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net