

ಮಂಡ್ಯ: ಜಾತಿ ಸಮೀಕ್ಷೆ ಜಾರಿಯಾದರೆ ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಆದ್ದರಿಂದ ಸಲಹೆ ಸಹಕಾರ ಕೊಡುವ ಮೂಲಕ ಜಾರಿಗೆ ತರಲು ನೆರವಾಗಿ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ಕೆಪಿಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿಗೌಡ ಅವರು ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣ ಸಮುದಾಯ ಹಾಗೂ ಹಿಂದುಳಿದ ವರ್ಗದವರು ದೊಡ್ಡ ಅಧಿಕಾರಗಳನ್ನು ಸಂಪೂರ್ಣವಾಗಿ ಪಡೆದಿಲ್ಲ. ಹಾಗಾಗಿ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚು ಒತ್ತು ನೀಡಬೇಕು. ಜಾತಿ ಗಣತಿಯ ಸಮೀಕ್ಷೆಯನ್ನು ನಡೆಸಲಾಗಿತ್ತು, ಆಯಾ ಸಮುದಾಯದವರು ಅಭಿವೃದ್ಧಿ ಆಗಿದಿಯೇ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಆದರೆ ಕಾಂತರಾಜು ಆಯೋಗ ಅವರ ಜಾತಿ ಸಮೀಕ್ಷೆಯನ್ನು ಪ್ರಬಲವಾಗಿ ವಿರೋಧ ಮಾಡಿರುವುದರಿಂದ ಮತ್ತೆ ಮಾಡಬೇಕಿದೆ ಎಂದು ವಿಷಾದಿಸದರು.
ಜಾತಿ ಸಮೀಕ್ಷೆಯಿಂದ ಜನಸಂಖ್ಯೆ ಅಷ್ಟೇ ತಿಳಿಯುವುದಿಲ್ಲ ಅಥವಾ ಕೇವಲ ಒಂದು ಜಾತಿಗೆ ಮೀಸಲಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಒಕ್ಕಲಿಗ, ಲಿಂಗಾಯಿತ ಸೇರಿದಂತೆ ಮೇಲುವರ್ಗದ ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗೂ ಇದು ಸಹಕಾರಿ ಆಗಿದೆ. ಹಾಗಾಗಿ ಜಾತಿ ಸಮೀಕ್ಷೆ ಜಾರಿಯಾಗಬೇಕು. ಮೀಸಲಾತಿ ಹೆಚ್ಚು ಮಾಡಲು ಜಾತಿ ಸಮೀಕ್ಷೆಯು ಸಹಕಾರಿಯಾಗಿದೆ ಎಂದು ತಿಳಿಸಿದರು.
ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಮಾತನಾಡಿದರು. ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿಗೌಡ, ಕೆ.ಆರ್.ನಗರದ ಶಾಸಕ ಶಂಕರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಗೋಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಖಂಡರಾದ ಸಾವಿತ್ರಮ್ಮ, ಶಶಿ, ಸುರೇಶ್, ಮಹೇಶ್, ಮಂಜಣ್ಣ ಇತರರಿದ್ದರು.