

ಬೆಂಗಳೂರು: ನಂ.1 ದಿನಪತ್ರಿಕೆ ವಿಜಯವಾಣಿ ಸಹೋದ್ಯೋಗಿಗಳಿಗಾಗಿ ಏರ್ಪಡಿಸಿರುವ ‘ವಿಜಯವಾಣಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಟೂರ್ನಿ ಬೆಂವಿವಿವಿ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬಸವನಗುಡಿಯ ಪ್ಲಾನೆಟ್ ಸ್ಪೋರ್ಟ್ಸ್ ಸಹಯೋಗದಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ವಿಜಯವಾಣಿ ದಿನಪತ್ರಿಕೆಯ ಸಂಪಾದಕೀಯ, ಜಾಹೀರಾತು, ಪ್ರಸರಣ, ಮುದ್ರಣ, ಜಿಲ್ಲಾ ತಂಡ ಸೇರಿ ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಮೊದಲ ದಿನ ನಾಕೌಟ್ ಮಾದರಿಯ ಲೀಗ್ ಪಂದ್ಯಗಳು ನಡೆಯಲಿವೆ. ಅದರಲ್ಲಿ ವಿಜೇತ ನಾಲ್ಕು ತಂಡಗಳು ಭಾನುವಾರದ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಭಾನುವಾರ ಪ್ರಶಸ್ತಿ ಪ್ರದಾನ: ವಿಜಯವಾಣಿ ಪ್ರೀಮಿಯರ್ ಲೀಗ್ ಫೈನಲ್ ವಿಜೇತ ತಂಡಕ್ಕೆ ಭಾನುವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಟ್ರೋಫಿ ವಿತರಿಸಲಾಗುವುದು. ರನ್ನರ್ ಅಪ್, ಮ್ಯಾನ್ ಆಫ್ ದಿ ಸೀರಿಸ್ ಬಹುಮಾನ ನೀಡಲಾಗುವುದು. ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುವ ಆಟಗಾರನಿಗೆ ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನ ನೀಡಲಾಗುತ್ತದೆ.
ವಾಸುಕಿ ವೈಭವ್ರಿಂದ ಉದ್ಘಾಟನೆ: ಸಂಗೀತ ನಿರ್ದೇಶಕ ಮತ್ತು ಬಿಗ್ಬಾಸ್ ಸೀಸನ್ 7ರ ಎರಡನೇ ರನ್ನರ್ ಅಪ್ ವಾಸುಕಿ ವೈಭವ್ ಟೂರ್ನಿಗೆ ಚಾಲನೆ ನೀಡುವರು. ಬೆಂವಿವಿ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್, ಕುಲಸಚಿವರಾದ ಡಾ. ಬಿ.ಕೆ. ರವಿ, ಡಾ. ಶಂಕರ ರಾಮಕೃಷ್ಣ ರೆಡ್ಡಿ, ವಿಆರ್ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕರಡಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸುವರು.