

ಮಡಿಕೇರಿ: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಹತ್ತು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಉತ್ಸವದ ಉಸ್ತುವಾರಿ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.
ಮಹಾಶಿವರಾತ್ರಿ ಉತ್ಸವದಲ್ಲಿ ಗ್ರಾಮದ ಭಜನಾ ಮಂಡಳಿಗಳು ಸೇರಿದಂತೆ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ದಿನಂಪ್ರತಿ ಸಂಜೆ 6.30 ರಿಂದ 8.30ರವರೆಗೆ ಸಂಗೀತಾರ್ಚನೆ ಮತ್ತು ಸತ್ಸಂಗ ಕಾರ್ಯಕ್ರಮ ಜರುಗಲಿವೆ.
ಮಹಾಶಿವರಾತ್ರಿ ದಿನವಾದ ಫೆ.21ರಂದು ಬೆಳಗ್ಗೆ 7ಕ್ಕೆ ಗಣಪತಿಹೋಮ, 8ಕ್ಕೆ ಮೃತ್ಯುಂಜಯ ಹೋಮ-ಸಂಕಲ್ಪ ಪೂಜೆ ನೆರವೇರಲಿದೆ. ಬೆಳಗ್ಗೆ 10.30 ರಿಂದ ಮೇಕೇರಿ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಈಶ್ವಾರಾರ್ಪಣೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ 6ಕ್ಕೆ ಗೋದೋಳಿ ಪೂಜೆ, ರಾತ್ರಿ 7.30ಕ್ಕೆ ದೀಪಾಲಂಕಾರ ನಡೆಯಲಿದೆ. ಬಳಿಕ ದೇವಾಲಯದ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ 8ಕ್ಕೆ ರುದ್ರಾಭಿಷೇಕ, 9.30ರಿಂದ ರಂಗ ಪೂಜೆ ಬಳಿಕ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.