ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕರೊನಾ ಜಾಗೃತಿ ಜಾಥಾಕ್ಕೆ ಚಾಲನೆ

17Tmk_Corona_Jatha
Published on

ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕರೊನಾ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸುವ ಜನಾಂದೋಲನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಚಾಲನೆ ನೀಡಿದರು.

ಜಿಲ್ಲಾ ನ್ಯಾಯಾಲಯದ ಆವರಣದ ಮುಂಭಾಗ ಶನಿವಾರ ಆರಂಭವಾದ ಜಾಥಾದಲ್ಲಿ ಕರೊನಾ ತಡೆಗಟ್ಟಲು ಸಾರ್ವಜನಿಕರು ಮುಖಗವಸು ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡುವುದು, ಸಾಮಾಜಿಕ ಅಂತರ ಕಾಪಾಡುವುದರ ಬಗ್ಗೆ ಅರಿವು ಮೂಡಿಸಲಾಯಿತು.

ಜಾಥಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿಎಚ್‌ಓ ಡಾ. ನಾಗೇಂದ್ರಪ್ಪ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

200 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಶನಿವಾರ 200 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, 276 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಾಸಾದರು. ಒಟ್ಟು ಸೋಂಕಿತರ ಸಂಖ್ಯೆ 18007ಕ್ಕೇರಿದ್ದು, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2172. ಈವರೆಗೆ ಆಸ್ಪತ್ರೆಯಿಂದ 15456 ಜನರು ಗುಣಮುಖರಾಗಿದ್ದು, ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗುವವರ ಸಂಖ್ಯೆ ತುಸು ಹೆಚ್ಚಾಗಿರುವುದು ನೆಮ್ಮದಿ ಮೂಡಿಸಿದೆ.

ಚಿಕ್ಕನಾಯಕನಹಳ್ಳಿ 11, ಗುಬ್ಬಿ 4, ಕೊರಟಗೆರೆ 6, ಕುಣಿಗಲ್ 20, ಮಧುಗಿರಿ 13, ಪಾವಗಡ 16, ಶಿರಾ 10, ತಿಪಟೂರು 12, ತುರುವೇಕೆರೆ 9 ಹಾಗೂ ತುಮಕೂರು ತಾಲೂಕು ಒಂದರಲ್ಲೇ ಬರೋಬ್ಬರಿ 99 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 379ಕ್ಕೇರಿದೆ. ಐಸಿಯುನಲ್ಲಿ 114 ಜನರು ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 20349 ಜನರನ್ನು ಗುರುತಿಸಲಾಗಿದ್ದು, ಎಲ್ಲರಿಗೂ ಪರೀಕ್ಷೆಗೆ ಒಳಪಡಿಸಲಾಗಿದೆ, ಜಿಲ್ಲೆಯೆಲ್ಲೆಡೆ ಸಾಮೂಹಿಕ ಕರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net