

ಮಡಿಕೇರಿ: ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಭಾನುವಾರ ರಾಷ್ಟ್ರಮಟ್ಟದ ಹಾಕಿ ಆಟಗಾರ ಹಾಗೂ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಆಟಗಾರ ಪಿ.ಎಲ್.ಮಂಜುನಾಥ್ ಚಾಲನೆ ನೀಡಿದರು.
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಮಂಜುನಾಥ್, ಯಾವುದೇ ಕ್ರೀಡೆಯಲ್ಲಿ ಮಕ್ಕಳಿಗೆ ಶಿಸ್ತು ಬಹಳ ಮುಖ್ಯ. ಹಾಗೆಯೇ ಪ್ರತಿ ಆಟದಲ್ಲೂ ಸೋಲು ಗೆಲುವು ಎಂಬುದು ಇದ್ದೇ ಇರುತ್ತದೆ. ಆದರೆ, ಸೋಲನ್ನು ಒಪ್ಪಿಕೊಳ್ಳುವ ಮನೋಭಾವ ಮಕ್ಕಳಲ್ಲಿ ಇರಬೇಕು ಎಂದು ಕಿವಿ ಮಾತು ಹೇಳಿದರು.
ಈ ಪಂದ್ಯಾವಳಿಯಲ್ಲಿ ಕೊಡಗಿನ ವಿವಿಧ ಶಾಲೆಗಳ ೨೧೦ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಶಾಲೆಯ ಪ್ರಾಂಶುಪಾಲ ಕೆ.ಎಸ್.ಸುಮಿತ್ರ ಆಡಳಿತ ನಿರ್ವಹಣಾಧಿಕಾರಿ ಪಿ.ರವಿ, ಟೇಬಲ್ ಟೆನ್ನಿಸ್ ತರಬೇತುದಾರ ರಚನ್ ಪೊನ್ನಪ್ಪ ಹಾಗೂ ಪಂದ್ಯಾವಳಿ ಸಂಚಾಲಕ ದಿನೇಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.