ಮೈಸೂರಿನಲ್ಲಿ ಅಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಓಂಕಾರ ಜಿಲ್ಲಾ ಘಟಕಕ್ಕೆ ಚಾಲನೆ

49
Published on

ಮೈಸೂರು: ಅಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ‘ಓಂಕಾರ’ ಮೈಸೂರು ಜಿಲ್ಲಾ ಘಟಕಕ್ಕೆ ನಗರದಲ್ಲಿ ಭಾನುವಾರ ಚಾಲನೆ ದೊರೆಯಿತು.
ಮೈಸೂರು ಹಾಗೂ ಮಂಡ್ಯ ಜಿಲ್ಲಾ ಪ್ರಾಂತಪಾಲರಿಗೆ ಸಂಸ್ಥೆಯ ಸಂಸ್ಥಾಪಕ ತಿರುಪತಿ ರಾಜು ಅವರು ಬ್ಯಾನರ್ ಹಸ್ತಾಂತರಿಸಿ ಮಾತನಾಡಿ, ಭಾರತದಲ್ಲಿ 15 ವರ್ಷಗಳ ಹಿಂದೆ ಪ್ರಾರಂಭವಾದ ಅಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ, 32ಕ್ಕೂ ಅಧಿಕ ದೇಶದಲ್ಲೂ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸುಮಾರು 50 ಸಾವಿರ ಸದಸ್ಯರನ್ನು ಹಾಗೂ 1800 ಶಾಖೆಗಳನ್ನು ಹೊಂದಿದ್ದು, ಅತಿ ವೇಗದಲ್ಲಿ ದೇಶದ ಪ್ರತಿ ರಾಜ್ಯ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿದೆ. ಅತಿ ಕಡಿಮೆ ಸೇವಾ ಶುಲ್ಕ ಮತ್ತು ನಿರಂತರ ನಾಯಕತ್ವ ಅಭಿವೃದ್ಧಿ ಸಂಸ್ಥೆ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಮುಖ್ಯವಾಗಿ ಹಸಿವು ನಿವಾರಣೆ, ಅಂಗವಿಕಲರ ಅಭಿವೃದ್ಧಿ, ಆರೋಗ್ಯ ತಪಾಸಣೆ, ಅವಶ್ಯಕತೆ ಇರುವಂತಹ ಸೇವಾ ಕಾರ್ಯಗಳನ್ನು ಗುರುತಿಸಿ ಎಲ್ಲ ಸದಸ್ಯರು ಒಂದುಗೂಡಿ ಸಾರ್ವಜನಿಕರಿಗೆ ಸಹಾಯ ಹಸ್ತ ನೀಡುವುದು ನಮ್ಮ ಗುರಿ. ಈಗಾಗಲೇ ಮೈಸೂರು ನಗರದಲ್ಲಿ 25 ಶಾಖೆಗಳು ಪ್ರಾರಂಭಗೊಂಡು ಸೇವಾ ಕಾರ್ಯಕ್ರಮ ಪ್ರಾರಂಭಿಸಿವೆ. ಮಂಡ್ಯದಲ್ಲಿ 15 ಕ್ಲಬ್‌ಗಳು ಪ್ರಾರಂಭಗೊಂಡು ಸೇವಾ ಕಾರ್ಯಕ್ರಮ ಪ್ರಾರಂಭಿಸಿವೆ. ಈ ಸೇವಾ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಅನುಮತಿಯೂ ಸಿಕ್ಕಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಚಾಲನೆ ನೀಡಿದರು. ಮೈಸೂರು ಜಿಲ್ಲೆಯಾದ 255ರ ಪ್ರಾಂತಪಾಲಕರಾಗಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲೆ 268ರ ಪ್ರಾಂತಪಾಲರಾಗಿ ಕೆ.ಟಿ.ಹನುಮಂತು ಅಧಿಕಾರ ವಹಿಸಿಕೊಂಡು ಪದಾಧಿಕಾರಿಗಳನ್ನು ಪರಿಚಯಿಸಿದರು. ಒಂದನೇ ಉಪ ಪ್ರಾಂತಪಾಲರಾಗಿ ಬಾಲಕೃಷ್ಣ ರಾಜು ಹಾಗೂ ಮಾದೇಗೌಡ ಹಾಗೂ ಎರಡನೇ ಪ್ರಾಂತಪಾಲರಾಗಿ ವೆಂಕಟೇಶ್ ಮತ್ತು ಕೆ.ಆರ್.ಶಶಿಧರ್ ಈಚಗೆರೆ ಅಧಿಕಾರ ವಹಿಸಿಕೊಂಡರು.
ಪದಾಧಿಕಾರಿಗಳಾದ ನಾಗರಾಜ್ ಬೈರಿ, ದಿವಾಕರ್, ಮುನಿಯಪ್ಪ, ವೆಂಕಟೇಶ್, ಬಾಲ ಕೃಷ್ಣರಾಜು, ಸಿರಿ ಬಾಲು, ಸಂತೋಷ್ ಕುಮಾರ್, ಗಂಗಾಧರಪ್ಪ, ರವೀಂದ್ರನಾಥ್, ರಮೇಶ್, ಚಂದ್ರಶೇಖರ, ಅಪ್ಪಾಜಿ, ಆತಿಥೇಯ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಬೈರಿ, ಕಾರ್ಯದರ್ಶಿ ಶ್ರೀಶೈಲ, ಉಪಾಧ್ಯಕ್ಷ ಕೃಷ್ಣಾಜಿ ರಾಯ್, ಕೋ ಚೇರ್ಮನ್ ಶೋಭಾ ಸಿರಿ ಬಾಲು, ಖಜಾಂಚಿ ಸಂಪತ್‌ಕುಮಾರ್‌ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net