

ವಿಜಯವಾಣಿ ಸುದ್ದಿಜಾಲ ಕುಶಾಲನಗರ
ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕುಶಾಲನಗರ ಫಾತಿಮ ಪ್ರೌಢಶಾಲೆಯಿಂದ ಕುಶಾಲನಗರ ಫಾತಿಮ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಕುಶಾಲನಗರ ಬಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸರ್ಕಾರಿ ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಪ್ರತಿ ವರ್ಷ ಆಗಸ್ಟ್ 29 ರಂದು ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಭಾರತವು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತದೆ. ಈ ದಿನವನ್ನು ದೇಶದ ಕ್ರೀಡಾ ಸಾಧಕರಿಗೆ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರುವ ನಿಟ್ಟಿನಲ್ಲಿ ಸಮರ್ಪಿಸಲಾಗಿದೆ. ಇದು ಶಿಸ್ತು, ಪರಿಶ್ರಮ, ಕ್ರೀಡಾ ಮನೋಭಾವ ಮತ್ತು ತಂಡದ ಕೆಲಸ ಸೇರಿದಂತೆ ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಎಂ.ಮಾರ್ಟಿನ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಿಸ್ತು, ಸಂಯಮ, ಶ್ರದ್ಧೆ, ಪರಿಶ್ರಮ, ಪ್ರಾಮಾಣಿಕ ಬೆಳೆಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡಿ ಯಶಸ್ಸುಗಳಿಸಬೇಕು ಎಂದು ಕರೆ ನೀಡಿದರು.
ಕ್ರೀಡಾಜ್ಯೋತಿ ಬೆಳಗಿಸಿದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪಾ ಮಾತನಾಡಿ, ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತವೆ ಎಂದರು.
ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿ’ಸಿಲ್ವ, ಕ್ರೀಡಾಕೂಟದ ಕಾರ್ಯದರ್ಶಿ ಎ.ಎ.ಲಕ್ಷ್ಮಣ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲರಾದ ಶ್ವೇತಾ, ಸಿಆರ್ ಪಿಟಿಇ ವಿಶ್ವನಾಥ್, ಪ್ರೌಢಶಾಲಾ ಪಾಲಕ ಪ್ರತಿನಿಧಿ ಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ದಯಾನಂದ ಪ್ರಕಾಶ್, ಎಂ.ಎಸ್. ಮಹೇಂದ್ರ, ಪತ್ರಕರ್ತರಾದ ಎಂ.ಎನ್.ಚಂದ್ರಮೋಹನ್, ಎಚ್.ಎಂ.ರಘು, ಶಿರಂಗಾಲ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಶೈಲಾ, ಫಾತಿಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಇತರರು ಇದ್ದರು. ಫಾತಿಮ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಹೂಪ್ಸ್ ನೃತ್ಯ ಹಾಗೂ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದವು.