

ಹಿರೇಕೆರೂರ: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಿರುವ 2024 -25ನೇ ಸಾಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹಿರೇಕೆರೂರು ರಟ್ಟಿಹಳ್ಳಿ ತಾಲೂಕಿನ ಪರಿಶಿಷ್ಟ ಜಾತಿ 52 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 46 ವಿದ್ಯಾರ್ಥಿಗಳು ಒಟ್ಟು 98 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಲಿದ್ದಾರೆ. 5 ದಿನದ ಪ್ರವಾಸ ಇದಾಗಿದ್ದು, ಜೋಗ ಫಾಲ್ಸ್, ಮುರ್ಡೆಶ್ವರ, ಶಿರಸಿ, ಉಡುಪಿ, ಮೈಸೂರು ಸೇರಿ ಹಲವು ಪ್ರವಾಸಿ ತಾಣಗಳನ್ನು ವಿದ್ಯಾರ್ಥಿಗಳು ವೀಕ್ಷಿಸಲಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ರವಿಕುಮಾರ ನಾಯಕ, ವಸಂತ ರಾವ್ ಪಾಟೀಲ, ವಾಣಿಶ್ರೀ, ಭಾರತಿ ಹಾಗೂ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಪಾಲಕರು ಇದ್ದರು.