

ಬೆಂಗಳೂರು: ಡೆಂಘೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲೀನಿಕ್‌ಗಳನ್ನು ಆರಂಭಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಾಮಸ್ವಾಮಿಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಸ್ಥಾಪಿಸಿರುವ ಫೀವರ್ ಕ್ಲೀನಿಕ್‌ಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವರು, ನಗರದಲ್ಲಿ 100 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಎರಡಕ್ಕಿಂತ ಹೆಚ್ಚು ಡೆಂಘೆ ಪ್ರಕರಣ ಕಂಡು ಬಂದಲ್ಲಿ ಅದನ್ನು ಹಾಟ್‌ಸ್ಪಾಟ್ ಎಂದು ಗುರುತಿಸಬೇಕು. ಜತೆಗೆ 100 ಮೀ. ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೆ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು. ಸೊಳ್ಳೆ ಕಚ್ಚದಂತೆ ಡೀಟ್ ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ನಾಗರಿಕರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶೀಘ್ರ ಡಯಾಲಿಸಿಸ್ ಕೇಂದ್ರ ಆರಂಭ:
ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆಂದು ಸ್ಥಾಪಿಸಿರುವ ಕಟ್ಟಡದಲ್ಲಿ ಇನ್ನೂ ಸೇವೆ ಆರಂಭವಾಗಿಲ್ಲ. ಈ ಸಂಬಂಧ ಸರ್ಕಾರಿ ಉಚಿತ ಡಯಾಲಿಸಿಸ್ ಸೇವೆ ಯೋಜನೆಯಡಿ, ಸದರಿ ಸ್ಥಳದಲ್ಲಿ ಡಯಾಲಿಸಿಸ್ ಸೇವೆ ಪ್ರಾರಂಭಿಸಬೇಕು. ಉಚಿತವಾಗಿ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಬಡಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಆರಂಭಿಸುವಂತೆ ಸಚಿವ ದಿನೇಶ್ ಗುಂಡೂರಾವ ಸೂಚನೆ ನೀಡಿದರು.
ಇದೇ ವೇಳೆ ರಾಮಸ್ವಾಮಿಪಾಳ್ಯದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಚಿವರು ಮಕ್ಕಳಿಗೆ ಡೀಟ್ ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿ ಡೆಂಘೆ ಕುರಿತು ಮಾಹಿತಿ ನೀಡಿದರು.
ಈ ವೇಳೆ ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಡಾ. ನವೀನ್ ಭಟ್ ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಡಾ. ನಿರ್ಮಲಾ ಬುಗ್ಗಿ ಮತ್ತಿತರರಿದ್ದರು.
ಕೊಳಗೇರಿಯಲ್ಲಿ ಫಾಗಿಂಗ್ ಮಾಡಿದ ಸಚಿವ:
ರಾಮಸ್ವಾಮಿಪಾಳ್ಯ ಕೊಳಗೇರಿಯ ರಸ್ತೆಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ, ಆರೋಗ್ಯ ಸಚಿವರೇ ಸ್ವತ: ಫಾಗಿಂಗ್ ಮಾಡಿದರು. ಇದೇ ವೇಳೆ ಮನೆ ಮನೆ ಭೇಟಿ ನೀಡಿ ಬಿತ್ತಿಪತ್ರಗಳನ್ನು ವಿತರಿಸಿ, ನಾಗರಿಕರಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ವಿನಂತಿಸಿದರು. ಸ್ವಚ್ಚ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಲಿದ್ದು, ನೀರನ್ನು ಶೇಖರಿಸಿಟ್ಟುಕೊಳ್ಳದೆ ಬದಲಾವಣೆ ಮಾಡುತ್ತಿರಬೇಕೆಂದು ಅರಿವು ಮೂಡಿಸಿದರು.