ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ

mysore
Published on

ಮೈಸೂರು: ಮೂರು ತಿಂಗಳ ಕಾಲ ನಡೆಯುವ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರನ್ನು ಸ್ವಾಗತಿಸುತ್ತಿದೆ.

ಗುರುವಾರ ಸಂಜೆ ವಸ್ತುಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸಚಿವ ಎಚ್.ಕೆ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಶಾಸಕರಾದ ಪುಟ್ಟರಂಗ ಶೆಟ್ಟಿ, ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಇತರರಿದ್ದರು.

ಬ್ರ್ಯಾಂಡ್ ಮೈಸೂರು, ಕಿನ್ನರ ದಸರಾ, ಹಸಿರು ಹುಲ್ಲಿನಿಂದ ಪ್ರಾಣಿಗಳ ಕಲಾಕೃತಿ ಪ್ರದರ್ಶನ, ಪುಷ್ಪ ಗುಚ್ಛಗಳ ಸರಮಾಲೆ, ಸಾಹಸ ಕಲಾವಿದರಿಂದ ಸ್ಟಂಟ್. ಸೆಲ್ಫಿ ಪಾಯಿಂಟ್, ಸಾಂಸ್ಕೃತಿಕ ಮನರಂಜನೆ…ಇದು ಈ ಸಲದ ವಿಶೇಷ

ಕಳೆದ ವರ್ಷಗಳಿಗಿಂತ ಈ ಬಾರಿಯ ದಸರಾ ವಸ್ತು ಪ್ರದರ್ಶನ ವಿಶಿಷ್ಟವಾಗಿದೆ. ಬ್ರ್ಯಾಂಡ್ ಮೈಸೂರು ಹೆಸರಿನಡಿ ನಿರ್ಮಾಣವಾಗಿರುವ ಅರಮನೆ ಮಾದರಿಯಲ್ಲಿ 20 ಬಗೆಯ ಬ್ರ್ಯಾಂಡ್ ಮೈಸೂರು ಉತ್ಪನ್ನಗಳ ಪ್ರದರ್ಶನ ಮತ್ತು ವೀಕ್ಷಣೆ ಲಭ್ಯ

ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆಯನ್ನು ನೀಡಲು ಇಂಟರಾಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್ ಗಮನ ಸೆಳೆಯುತ್ತಿದೆ. ವಿವಿಧ ಇಲಾಖೆಗಳ 30 ಮಳಿಗೆಗಳು, 153 ಖಾಸಗಿ ಮಳಿಗೆಗಳಲ್ಲಿ ವಿವಿಧ ವಿಷಯಗಳ ಮಾದರಿ ವೀಕ್ಷಣೆಗೆ ದೊರೆಯಲಿವೆ.

ಮುಖ್ಯದ್ವಾರ ಮುಂಭಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳು, ಅಲ್ಲಿರುವ ವೃತ್ತಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮ ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಪ್ರದರ್ಶನದ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು 3 ಎಲೆಕ್ಟ್ರಾನಿಕ್ ವಾಹನಗಳ ಸೌಲಭ್ಯವನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net