ಬೆಂಗಳೂರು ಟ್ರಾಫಿಕ್ ಇಂಜಿನ್ ಗೆ ಚಾಲನೆ

dkshivakumar
Published on

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಳಕೆ ಮೂಲಕ ಟ್ರಾಫಿಕ್ ನಿಯಂತ್ರಿಸುವ ‘‘ಬೆಂಗಳೂರು ಟ್ರಾಫಿಕ್ ಇಂಜಿನ್’ ಗೆ ಚಾಲನೆ ನೀಡಲಾಗಿದೆ. ಈ ತಂತ್ರಜ್ಞಾನವು ತುರ್ತುಸೇವೆ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ.


ಬೆಂಗಳೂರು ನಗರ ಸಂಚಾರಿ ಪೋಲಿಸರು ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -೨೪ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದರು.


ಡಾ.ಜಿ.ಪರಮೇಶ್ವರ್ ಮಾತನಾಡಿ,ನಗರದ ಸಂಚಾರ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಅಗತ್ಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದುದು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರೇಳು ತಿಂಗಳಲ್ಲಿ ರಾಜಧಾನಿ ಸಂಚಾರ ದಟ್ಟಣೆಗೆ ಹಲವು ಯೋಜನೆ ರೂಪಿಸಿದೆ. ತಂತ್ರಾಂಶಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದ್ರಾಬಾದ್ ಸೇರಿ ದೇಶದ ಮೆಟ್ರೋಪಾಲಿಟಿಯನ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತೀರ ಕಡಿಮೆಯಾಗಿದೆ. ಕಮಾಂಡ್ ಸೆಂಟರ್‌ನಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲಾಗುತ್ತಿದೆ. ಜನರು ಮತ್ತಷ್ಟು ಸುರಕ್ಷಿತವಾಗಿ ಸಂಚರಿಸುವ ದೃಷ್ಟಿಯಿಂದ ತಂತ್ರಜ್ಞಾನ ಬಳಸಲಾಗುವುದು ಎಂದರು.


ಬೇರೆಯರನ್ನೂ ರಕ್ಷಣೆ ಮಾಡಿಬೇಕು:
ಬೆಂಗಳೂರಿನಲ್ಲಿ ೧ ಕೋಟಿಗೂ ಹೆಚ್ಚು ವಾಹನಗಳಿವೆ. ೭೫ ಸಾವಿರಕ್ಕಿಂತ ಹೆಚ್ಚು ವಾಹನಗಳು ಬೆಂಗಳೂರಿನಿಂದ ಹೊರಗಿನಿಂದ ಪ್ರವೇಶಿಸುತ್ತವೆ. ೭೦-೮೦ ಸಾವಿರ ದ್ವಿಚಕ್ರ ವಾಹನಗಳಿದ್ದು ೨೦೨೩ರ ಅವಧಿಯಲ್ಲಿ ರಾಜಧಾನಿಯಲ್ಲಿ ಸುಮಾರು ೯೦೦ ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಆ ಹಿನ್ನೆಲೆಯಲ್ಲಿ ನಮ್ಮ ರಕ್ಷಣೆ ಜತೆಗೆ ಇತರ ಜೀವನವನ್ನೂ ರಕ್ಷಣೆ ಮಾಡಬೇಕಾಗಿದೆ. ಅಪಘಾತದ ಮೂಲಕ ಬೇರೆಯ ಪ್ರಾಣ ತೆಗೆಯುವ ಹಕ್ಕು ನಮಗಿಲ್ಲ ಎಂಬುವುದನ್ನು ಮೊದಲು ತಿಳಿದು ಕೊಳ್ಳಬೇಕು ಎಂದು ಹೇಳಿದರು.
ಸಂಚಾರ ನಿಯಮಗಳ ಬಗ್ಗೆ ಯುವ ಸಮುದಾಯಕ್ಕೆ ತಿಳುವಳಿಕೆ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಜನರಿಗೆ ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಧೈರ್ಯವಿರಬೇಕು, ಭಂಡತನ ಇರಬಾರದು:
ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಲ್ಮೆಟ್ ಧರಿಸಿ ಮೋಟಾರು ಬೈಕ್ ಚಾಲನೆ ಮಾಡದೇ ಇರುವುದು, ಫುಟ್‌ಪಾತ್ ಮೇಲೆ ಗಾಡಿ ಚಲಾಯಿಸಿರುವ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ ಯುವಕರೆ ಹೆಚ್ಚು ಸಾವನ್ನಪ್ಪಿದ್ದಾರೆ. ಜೀವನದಲ್ಲಿ ಧೈರ್ಯವಿರಬೇಕು. ಆದರೆ ಭಂಡತನ ಇರಬಾರದು. ರಸ್ತೆ ಸಂಚಾರಿ ನಿಯಮ ಪಾಲನೆ ಯುವ ಸಮುದಾಯ ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.
ಕಳೆದ ೩ ವರ್ಷಗಳಲ್ಲಿ ೬ ಸಾವಿರಕ್ಕೂ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲಾಗುವುದು ಎಂದು ಹೇಳಿದರು.
ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ಹರೀಶ್ ಸಾಂತ್ವನ ಯೋಜನೆ ಜಾರಿಗೆ ತಂದಿತ್ತು. ಆದರೆ ಅಪಘಾತವಾಗಿ ಹೋದ ಜೀವವನ್ನು ಮತ್ತೆ ಮರಳಿ ತರಲು ಸಾಧ್ಯವೇ? ುತ್‌ಪಾತ್ ಮೇಲೆ ಗಾಡಿ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡಿ ವಾಹನ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net