ಆನೆಗಳನ್ನು ದೂರದ ಕಾಡಿಗೆ ಓಡಿಸಿ

ಹುನುಗನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವತಿ ಬಾರ್ಕೂರ್ ಅವರಿಗೆ ಚೀಕನಹಳ್ಳಿ-ಹುನುಗನಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಹುನುಗನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವತಿ ಬಾರ್ಕೂರ್ ಅವರಿಗೆ ಚೀಕನಹಳ್ಳಿ-ಹುನುಗನಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ದೂರದ ಕಾಡಿಗೆ ಓಡಿಸುವಂತೆ ಆಗ್ರಹಿಸಿ ಚೀಕನಹಳ್ಳಿ-ಹುನುಗನಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಹುನುಗನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇವತಿ ಬಾರ್ಕೂರ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಕಾಫಿ ಬೆಳೆಗಾರ ರಮೇಶ್ ಸುವರ್ಣ ಮಾತನಾಡಿ, ಕಾಡಾನೆಗಳ ಉಪಟಳದಿಂದ ಸಂಪೂರ್ಣ ನಾಶವಾಗುತ್ತಿವೆ. ಪ್ರಾಣಹಾನಿ ಸಂಭವಿಸುವ ಮುನ್ನ ಸರ್ಕಾರ ಮತ್ತು ಅರಣ್ಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಎಚ್ಚೆತ್ತು ಕಾಡಾನೆಗಳನ್ನು ಶಾಶ್ವತವಾಗಿ ದೂರದ ಕಾಡಿಗೆ ಓಡಿಸಲು ಮುಂದಾಗಬೇಕಿದೆ ಎಂದರು.

ಬಿಕ್ಕೋಡು, ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತ್ಯೇಕವಾಗಿ 100 ಕ್ಕೂ ಹೆಚ್ಚು ಆನೆಗಳ ಹಿಂಡು ಬೀಡು ಬಿಟ್ಟಿವೆ. ಕಾಫಿ, ತೋಟದ ಬೆಳೆ ಸೇರಿದಂತೆ ಭತ್ತದ ಸಸಿಗಳನ್ನು ತಿಂದು ನಾಶ ಪಡಿಸುತ್ತಿವೆ. ಜತೆಗೆ ಮನೆ ಆವರಣಕ್ಕೆ ಆಗಮಿಸಿ ಸಿಕ್ಕಿದ್ದನ್ನು ತಿಂದು ಧ್ವಂಸಗೊಳಿಸುತ್ತಿವೆ. ಹಾಗಾಗಿ ಆನೆಗಳಿಗೆ ಅಗತ್ಯವಾಗಿ ಬೇಕಾದ ಆಹಾರದ ಗಿಡಗಳನ್ನು ಬೆಳೆಸುವ ಕೆಲಸವಾಗಬೇಕು. ಬೆಳೆ ಕಳೆದುಕೊಂಡ ರೈತರು, ಬೆಳೆಗಾರರಿಗೆ ಪರಿಹಾರ ನಿಡಬೇಕು. ಪ್ರತಿ ಆನೆಗೂ ಜಿಪಿಎಸ್ ಟ್ರಾೃಕರ್ ಅಳವಡಿಸಿ, ರೈತರು, ಸಾರ್ವಜನಿಕರಿಗೆ ಜಿಪಿಎಸ್ ಟ್ರ್ಯಾಕರ್ ಅಫ್ಲಿಕೇಷನ್ ಡೆವಲಪ್ ಮಾಡಬೇಕು. ಇನ್ನು ಸೋಲಾರ್ ಫೆನ್ಸಿಂಗ್ ಮಾಡಲು ಶೇ.100ರಷ್ಟು ಸಬ್ಸಿಡಿ ನೀಡಬೇಕು ಎಂದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಹುನುಗನಹಳ್ಳಿ ಪಿಡಿಒ ರೇವತಿ ಬಾರ್ಕೂರ್, ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಹಿರಿಯ ಅಧಿಕಾರಿಗಳ ಮೂಲಕ ಕಳುಹಿಸಲಾಗುವುದು ಎಂದರು.

ಚೀಕನಹಳ್ಳಿ-ಹುನುಗನಹಳ್ಳಿ ಭಾಗದ ಗ್ರಾಮಸ್ಥರಾದ ಯತಿನ್, ಮನು, ರಂಜಿತ್, ಚಕ್ರವರ್ತಿ, ಪುನಿತ್, ವನಜಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net