

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪ್ರಗತಿಪರ ನಾಗರಿಕ ಸೇವಾ ಸಮಿತಿ, ವಿವಿಧ ಸಂಘಟನೆಗಳು ಮತ್ತು ನಾಡ್ಪಾಲು ಗ್ರಾಮಸ್ಥರು ನೆಲ್ಲಿಕಟ್ಟೆ ಕೋಟಿಬೆಟ್ಟುವಿನಲ್ಲಿ ಬುಧವಾರ ‘ಕಾಡಾನೆ ಓಡಿಸಿ ಊರು ಉಳಿಸಿ’ ಪ್ರತಿಭಟನೆ ನಡೆಸಿದರು.
ನಾಡ್ಪಾಲು ಗ್ರಾಮದಲ್ಲಿ ಆನೆ ಬೀಡುಬಿಟ್ಟು ಕೃಷಿ ಹಾಳು ಮಾಡುತ್ತಿವೆ. ಅರಣ್ಯ ಇಲಾಖೆಯವರು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಇದು ಸಾಂಕೇತಿಕ ಪ್ರತಿಭಟನೆ. ಏನಾದರೂ ಅನಾಹುತ ಸಂಭವಿಸಿದರೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಸಂಬಂಧಿಸಿದ ಇಲಾಖೆಗಳಿಗೆ ಬೀಗ ಜಡಿದು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಮುಟ್ಲುಪಾಡಿ ಸತೀಶ್ ಶೆಟ್ಟಿ ಎಚ್ಚರಿಕೆ ನೀಡಿದರು.
ಎಲ್ಲ ಇಲಾಖೆಯವರು ಸಮನ್ವಯ ಸಾಧಿಸಿ ಆನೆ ಓಡಿಸುವ ಕೆಲಸ ಮಾಡಬೇಕು. ಆದ್ಯತೆ ನೆಲೆಯಲ್ಲಿ ಜನರಿಗೆ ರಕ್ಷಣೆ ಕೊಡುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತದೆ ಎಂದು ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹೇಳಿದರು.
ಕೃಷಿಕರಾದ ರಾಜೀವ ಶೆಟ್ಟಿ, ಮೀನಾ ಪೂಜಾರಿ, ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ, ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್, ಪ್ರಮುಖರಾದ ಭಾಸ್ಕರ ಶೆಟ್ಟಿ, ದಿನೇಶ್ ಹೆಗ್ಡೆ, ರಮೇಶ ಶೆಟ್ಟಿ ಅಜ್ಜೊಳ್ಳಿ, ಸೀತಾನದಿ ವಿಜಯೇಂದ್ರ ಶೆಟ್ಟಿ, ವಿಜಯ ಶೆಟ್ಟಿ ಭಾಗವಹಿಸಿದ್ದರು.
ಯಾರಿಗಾದರೂ ಆನೆ ಕಾಣಿಸಿಕೊಂಡಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ನಿರಂತರವಾಗಿ ಗಸ್ತು ಕಾರ್ಯಾಚರಣೆ ಮಾಡುವ ಮೂಲಕ ಜನರಿಗೆ ರಕ್ಷಣೆ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ.-ಸಿದ್ದೇಶ್ವರ, ವಲಯ ಅರಣ್ಯಾಧಿಕಾರಿ