

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ತಿಂಗಳಾಂತ್ಯದಲ್ಲಿ ಏಕಕಾಲಕ್ಕೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಬಡವರಿಗೆ, ಹಿಂದುಳಿದವರಗೆ ನಿವೇಶನ ಹಾಗೂ ಮನೆ ನೀಡಲು ಈಗಾಗಲೇ ಸಿದ್ಧತೆ ನಡೆಸಲಾಗಿದ್ದು, ತಿಂಗಳಾಂತ್ಯಕ್ಕೆ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲಾಗುವುದು ಎಂದರು. ಜನಪರವಾದ, ರೈತರ ಪರವಾದ, ಬಡವರ ಪರವಾದ, ಎಲ್ಲ ವರ್ಗದ ಪರವಾದ, ಎಲ್ಲ ಜಿಲ್ಲೆಗಳಿಗೂ ಸಮಾನ ಅವಕಾಶ ನೀಡಿರುವ ಒಳ್ಳೆಯ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ದೇವನಹಳ್ಳಿಗೆ ಮೆಟ್ರೋ ವಿಸ್ತರಣೆ, ಜಿಲ್ಲಾ ಕ್ರೀಡಾಂಗಣ, ಕೆರೆಗೆ ನೀರು ತುಂಬಿಸುವುದು, ರಸ್ತೆಗಳ ಅಭಿವೃದ್ಧಿಗೆ ಸೇರಿ ಹಲವು ಯೋಜನೆಗಳನ್ನು ಜಿಲ್ಲೆಗೆ ನೀಡಿದ್ದಾರೆ. ಸರ್ಕಾರ ಡಿಸಿಸಿ ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದು ರೈತರು, ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕೇಂದ್ರಗಳ ಉದ್ಘಾಟನೆ: ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕಾರಹಳ್ಳಿ, ಕೊಯಿರಾ, ವಿಶ್ವನಾಥಪುರ, ಕುಂದಾಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲೆಗಳ ಅಭಿವೃದ್ದಿ, ಶಿಕ್ಷಣ, ರಸ್ತೆ ಸೌಕರ್ಯ, ಸ್ವಚ್ಛತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಗುದ್ದಲಿಪೂಜೆ ಹಾಗೂ ಗ್ರಾಮ ಪಂಚಾಯಿತಿಗಳ ಹೈ-ಮಾಸ್ಟ್‌ಲೈಟ್, ಅಂಗಡಿ ಮಳಿಗೆಗಳು, ಮಲ ತ್ಯಾಜ್ಯ ಘಟಕ, ಅರಿವು ಕೇಂದ್ರವನ್ನು ಸಚಿವರು ಉದ್ಘಾಟಿಸಿದರು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕುಂದಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ಭಿಣಿಯರಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.