ಮಹಾತ್ಮರ ಸಂಗಮ ರಥಯಾತ್ರೆಗೆ ಚಾಲನೆ

New Siddharudhamatha New
Published on

ಹುಬ್ಬಳ್ಳಿ : ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಸಮಕಾಲಿನ ಮಹಾತ್ಮರಾದ ಗರಗನ ಜಗದ್ಗುರು ಶ್ರೀ ಮಡಿವಾಳೇವರ ಸ್ವಾಮೀಜಿ, ನವಲಗುಂದದ ಜಗದ್ಗುರು ಶ್ರೀ ಅಜಾತ ನಾಗಲಿಂಗ ಸ್ವಾಮೀಜಿ, ಉಣಕಲ್ಲನ ಜಗದ್ಗುರು ಶ್ರೀ ಸಿದ್ದಪ್ಪಜ್ಜ ಸ್ವಾಮೀಜಿ, ಶಿಶುನಾಳದ ಶ್ರೀ ಸಂತ ಶರೀಫ ಶಿವಯೋಗಿಗಳು ಹಾಗೂ ಹುಬ್ಬಳ್ಳಿಯ ಜಗದ್ಗುರು ಶ್ರೀ ಗುರುನಾಥರೂಢ ಸ್ವಾಮೀಜಿ ಅವರ ನೂತನ ಆರು ಉತ್ಸವ ಮೂರ್ತಿಗಳ ಹಾಗೂ ಅಂಬಾರಿ ಮಂಟಪಗಳ ಸಂಗಮ ರಥಯಾತ್ರೆಗೆ ಇಲ್ಲಿನ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಜಗದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸಮಕಾಲನಿ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮೀಟಿ ಸದಸ್ಯರು ಹಾಗೂ ಧಾರವಾಡ ಜಿಲ್ಲೆಯ 62 ಗ್ರಾಮಗಳ ಭಕ್ತರು ಸೇರಿ ಈ ಆರು ಜನ ಮಹಾತ್ಮರ ಉತ್ಸವ ಮೂರ್ತಿಗಳನ್ನು ಮಾಡಿಸಿದ್ದಾರೆ. ಈ ಮೂರ್ತಿಗಳು ಶುಕ್ರವಾರದಿಂದ ಧಾರವಾಡ ಜಿಲ್ಲೆಯ 62 ಪ್ರಮುಖ ಗ್ರಾಮಗಳಲ್ಲಿ 24 ದಿನಗಳವರೆಗೆ ಸಂಚರಿಸಲಿವೆ.

ಸಂಗಮ ರಥಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಬೀದರನ ಶ್ರೀ ಚಿದಂಬರಾಶ್ರಮ ಶ್ರೀ ಸಿದ್ಧಾರೂಢಮಠದ ಡಾ. ಶಿವಕುಮಾರ ಸ್ವಾಮೀಜಿ, ಜಗತ್ತು ಕಲುಷಿತಗೊಂಡರೆ ಪರಮಾತ್ಮ ಹೊಸರೂಪ ತಾಳಿ, ಕಲ್ಮಶ ಹೋಗಲಾಡಿಸುತ್ತಾನೆ. ಜಗತ್ತಿನ ಕಲ್ಯಾಣಕ್ಕಾಗಿ ಪರಮಾತ್ಮ ಮಹಾತ್ಮರ ರೂಪದಲ್ಲಿ ಬರುತ್ತಾನೆ ಎಂದರು.

ಭಾರತ ಅಷ್ಟೇ ಅಲ್ಲದೇ, ವಿದೇಶಗಳಲ್ಲಿಯೂ ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಭಕ್ತರು ಇದ್ದಾರೆ. ಸಿದ್ಧಾರೂಢರು ಭಕ್ತರನ್ನು ಉದ್ಧಾರ ಮಾಡುವ ಸ್ವಾಮೀಜಿ. ಭಕ್ತರು ದೇವರಲ್ಲಿ ವರ ಕೇಳುವ ಬದಲು, ಪರಮಾತ್ಮನಿಗೆ ಶರಣಾಗಬೇಕು. ಮನಸ್ಸಿನಲ್ಲಿಯೇ ಮಠ ಕಟ್ಟಬೇಕು ಎಂದು ಹೇಳಿದರು.

ಚಳಕಾಪುರದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಭಾವದಂತೆ ದೇವರು ಕಾಣುತ್ತಾನೆ. ಶ್ರೀ ಸಿದ್ಧಾರೂಢರು ಬೇಡಿದವರಿಗೆ ಅಗತ್ಯ ವರ ನೀಡುವ ಕಲ್ಪವೃಕ್ಷ. ಶ್ರೀ ಮಠದಲ್ಲಿ ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹವೂ ಸಿಗುತ್ತದೆ ಎಂದರು.

ಸೇವಾ ಟ್ರಸ್ಟ್ ಕಮೀಟಿ ಸಂಸ್ಥಾಪಕ ಮನೋಜ ಗದಗಿನ ಮಾತನಾಡಿ, ನಂಬಿದ ಭಕ್ತರನ್ನು ಶ್ರೀ ಸಿದ್ಧಾರೂಢ ಸ್ವಾಮೀಜಿ ಎಂದಿಗೂ ಬಿಟ್ಟಿಲ್ಲ. ಜೀವನದಲ್ಲಿ ಕಷ್ಟಗಳು ಸಹಜ. ಪರಮಾತ್ಮನನ್ನು ನಂಬಿ ನಡೆದರೆ, ಕಷ್ಟಗಳು ದೂರವಾಗುವವು ಎಂದು ಹೇಳಿದರು.

ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಮಾಜಿ ಅಧ್ಯಕ್ಷ ಡಿ.ಡಿ. ಮಾಳಗಿ, ಬಿಜೆಪಿ ಮುಖಂಡ ರಂಗಾ ಬದ್ದಿ ಹಾಗೂ ಇತರರು ಮಾತನಾಡಿದರು.

ಇಂಚಲದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಬದಾಮಿ ತಾಲೂಕು ಹೆಬ್ಬಳ್ಳಿಯ ಶ್ರೀ ಗುರು ಶಾಬುದ್ದೀನಶಾಯಿ ಅಜ್ಜನವರು, ಬಮ್ಮಿಗಟ್ಟಿಯ ಶ್ರೀ ದಯಾನಂದ ಸ್ವಾಮೀಜಿ, ತಾವರಗೇರಿಯ ಶ್ರೀ ನಿರ್ಗನಾನಂದ ಸ್ವಾಮೀಜಿ, ವರ್ಷಾ ಗದಗಿನ, ಮಾಜಿ ಮೇಯರ್ ಅನಿಲ ಪಾಟೀಲ, ಡಾ. ಗೋವಿಂದ ಮಣ್ಣೂರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net