ಮೈಸೂರಿನಲ್ಲಿ ಕೆಂಪೇಗೌಡ ರಥಯಾತ್ರೆಗೆ ಚಾಲನೆ

kempegowda
Published on

ಮೈಸೂರು: ಬೆಂಗಳೂರಿನಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯ ಆವರಣದಲ್ಲಿ ಗೋಪುರ ನಿರ್ಮಾಣಕ್ಕೆ ನಗರದಲ್ಲಿ ಪವಿತ್ರ ಮಣ್ಣು (ಮೃತ್ತಿಕೆ) ಸಂಗ್ರಹಿಸುವ ರಥಯಾತ್ರೆಗೆ ಶುಕ್ರವಾರ ಚಾಲನೆ ದೊರೆಯಿತು. ನಗರದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಶುಕ್ರವಾರ ಮತ್ತು ಶನಿವಾರ ಮೃತ್ತಿಗೆ ಸಂಗ್ರಹಿಸುವ ಕಾರ್ಯ ನಡೆಯಲಿದೆ.

ಶಾಸಕ ಎಲ್. ನಾಗೇಂದ್ರ ಮಾತನಾಡಿ, ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರವಾಗಿದೆ. ಈ ಬೆಳವಣಿಗೆಗೆ ನಾಡಪ್ರಭು ಕೆಂಪೇಗೌಡರು ಹಾಕಿದ ಭದ್ರವಾದ ಬುನಾದಿಯೇ ಕಾರಣ. ಕೆಂಪೇಗೌಡ ಅವರ ಸೇವೆ ಸ್ಮರಿಸಲು ಸರ್ಕಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದೆ. ಇದೀಗ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದರು.

ಕಾಗಿಲೆ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರಪಂಚದಲ್ಲಿ ಎತ್ತರವಾದ ವ್ಯಕ್ತಿತ್ವ ಹೊಂದಿದವರು ನಾಡಪ್ರಭು ಕೆಂಪೇಗೌಡ. ಅಂತಹ ವ್ಯಕ್ತಿಯ ಎತ್ತರವಾದ ಪ್ರತಿಮೆ ನಿರ್ಮಾಣ ಮಾಡಿರುವುದು ಸಂತಸದ ಸಂಗತಿ. ಇಂತಹ ಮಹಾತ್ಮರು ಮತ್ತೆ ಹುಟ್ಟಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸೋಮಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರು ನಾಡನ್ನು ಕಟ್ಟಲು ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಬೆಂಗಳೂರು ನಗರವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸುವಲ್ಲಿ ಕೆಂಪೇಗೌಡರ ಪಾತ್ರ ಅಪಾರವಾದದ್ದು ಎಂದರು.

ಈ ಸಂದರ್ಭ ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಎಸ್.ಎ. ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಗಳಾ ಸೋಮಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net