

ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ‘ಕನ್ನಡ ಕಾಯಕ ವರ್ಷಾಚರಣೆ-2020’ಕ್ಕೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ಲಾಂಛನವನ್ನು ಅಧ್ಯಕ್ಷ ಟಿ.ಎಸ್. ನಾಗಾಭರಣ ಗುರುವಾರ ಅನಾವರಣ ಮಾಡಿದರು. ವಿಧಾನಸೌಧದಲ್ಲಿನ ಕಚೇರಿಯಲ್ಲಿ ಲಾಂಛನ ಬಿಡುಗಡೆ ಜತೆಗೆ ಕನ್ನಡ ಕಾಯಕ ವರ್ಷಕ್ಕೂ ಚಾಲನೆ ನೀಡಿದರು.
ಆಡಳಿತದಲ್ಲಿ ಕನ್ನಡ ತನವುಳ್ಳ ತಂತ್ರಜ್ಞಾನವನ್ನು ಹೆಚ್ಚೆಚ್ಚು ಬಳಸುವ ಮೂಲಕ ನಮ್ಮ ಭಾಷೆಗೆ ವಿಶ್ವಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಧಿಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ನಾಗಾಭರಣ ಹೇಳಿದರು.
ವಿವಿಧ ರಂಗಗಳ ಜನರು ಸುಲಭವಾಗಿ ಕಲಿಯುವಂತಾಗಲು ಆರಂಭಿಕ ಕ್ರಮವಾಗಿ ಇ-ಕನ್ನಡ ಕಲಿಕಾ ಅಕಾಡೆಮಿ
‘ಕರ್ನಾಟಕ ಡಾಟ್ ಭಾರತ’ ಎಂಬ ಯುಆರ್ಎಲ್ ಅನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ (ನಿಕ್ಸಿ) ಕರ್ನಾಟಕ ಸರ್ಕಾರದ ಬಳಕೆಗಾಗಿ ಮೀಸಲಿಟ್ಟಿದೆ. ಅದನ್ನು ಪಡೆಯುವ ದೃಷ್ಟಿಯಿಂದ ಇ-ಆಡಳಿತ ಇಲಾಖೆಯ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಇ-ಮೇಲ್ ವಿಳಾಸಗಳನ್ನು ಕನ್ನಡದಲ್ಲಿಯೇ ರಚಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸಾವಿರಕ್ಕೂ ಹೆಚ್ಚು ಜಾಲ ತಾಣಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಎಲ್ಲ ಇಲಾಖೆ ಗಳಿಗೂ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಲಿದ್ದು, ‘ಕನ್ನಡ ಕಾಯಕ’ ವರ್ಷದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಾಗಾಭರಣ ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರಾಥಮಿಕ ಹಂತದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ರೂಪಿಸಲು ಅಗತ್ಯ ಕಾನೂನು ಜಾರಿಗೊಳಿಸುವುದು ಪ್ರಾಧಿಕಾರದ ಆಶಯವಾಗಿದೆ ಎಂದರು.
ಪ್ರಾಧಿಕಾರದ ಸದಸ್ಯರಾದ ವಿಜಯಲಕ್ಷ್ಮೀ ಬಾಳೆಕುಂದ್ರಿ, ಅಬ್ದುಲ್ ರೆಹಮಾನ್ ಪಾಷಾ, ಡಾ. ಗುಬ್ಬಿಗೂಡು ರಮೇಶ್, ಡಾ. ಕಿಶೋರ್, ಸುರೇಶ್ ಬಡಿಗೇರ್, ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ, ಆಪ್ತ ಕಾರ್ಯದರ್ಶಿ ಡಾ. ವೀರಶೆಟ್ಟಿ, ಕನ್ನಡ ಕಾಯಕ ಪಡೆಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಾಲತಾಣಗಳಲ್ಲಿ ಸಂಪೂರ್ಣ ಕನ್ನಡ
ಕಣಜ ಕನ್ನಡ ಜಾಲತಾಣಕ್ಕೆ ಕಾಯಕಲ್ಪ ನೀಡಲಾಗುವುದು. ಜಾಗತಿಕ ತಂತ್ರಜ್ಞಾನ ವೇದಿಕೆಗಳಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡ ಮತ್ತು ಸ್ವಾಯತ್ತತೆ ಅಗತ್ಯವಿದ್ದು, ಮೈಸೂರು ವಿವಿಯಲ್ಲಿ 4 ಎಕರೆಗೂ ಹೆಚ್ಚಿನ ಪ್ರದೇಶ ಮತ್ತು ತಾತ್ಕಾಲಿಕ ಬಳಕೆಗೆ ವಿಸ್ತಾರವಾದ ಕಚೇರಿ ಗುರುತಿಸಲಾಗಿದೆ. ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತ್ತ ಸ್ಥಾನಮಾನಕ್ಕೆ ಪ್ರಯತ್ನ ನಡೆಸಿರುವುದಾಗಿ ನಾಗಾಭರಣ ಮಾಹಿತಿ ನೀಡಿದರು.
ಹಾಡ ಬನ್ನಿ.. ನೋಡ ಬನ್ನಿ..
‘ಹಾಡ ಬನ್ನಿ- ನೋಡ ಬನ್ನಿ’ ಕಾರ್ಯಕ್ರಮದ ಮೂಲಕ 10 ಕಿರುಚಿತ್ರ ಮತ್ತು ಹಾಡುಗಳಿಗೆ ವರ್ಷಾಂತ್ಯಕ್ಕೆ ಪ್ರಶಸ್ತಿ ನೀಡಲಾಗುವುದು. ವಿವಿಧ ಗಣ್ಯರಿಂದ ನಾಡಿನ ಮಕ್ಕಳಿಗೆ ಉದ್ಯೋಗ ಪೂರ್ವ ಯೂಟ್ಯೂಬ್ ತರಬೇತಿ ಹಮ್ಮಿಕೊಳ್ಳಲಾಗುವುದು. ಸ್ವಯಂಸೇವಕರಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿ ಪ್ರಸಾರದಲ್ಲಿ ತೊಡಗುವವರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈಜೋಡಿಸಲಿದ್ದು, ಅವರ ಯೋಜನೆಗಳಿಗೆ ವೇದಿಕೆ ಕಲ್ಪಿಸಲಿದೆ. ಹೊರರಾಜ್ಯ ಮತ್ತು ಹೊರದೇಶದ ಜನರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ವಠಾರ (ಅಪಾರ್ಟ್ವೆುಂಟ್)ಗಳಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನಾಗಾಭರಣ ಹೇಳಿದರು.
ಪ್ರಶಸ್ತಿ: ಹಾಡ ಬನ್ನಿ-ನೋಡ ಬನ್ನಿ ಕಾರ್ಯಕ್ರಮದ ಮೂಲಕ 10 ಕಿರುಚಿತ್ರ ಮತ್ತು ಹಾಡುಗಳಿಗೆ ವರ್ಷಾಂತ್ಯಕ್ಕೆ ಪ್ರಶಸ್ತಿ ನೀಡಲಾಗುವುದು. ಹೊರರಾಜ್ಯ ಮತ್ತು ಹೊರದೇಶದ ಜನರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಅಪಾರ್ಟ್ವೆುಂಟ್ಗಳಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಒಟ್ಟಾರೆಯಾಗಿ ಕನ್ನಡ ಕಾಯಕ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಟಿಬದ್ಧವಾಗಿರುವುದಾಗಿ ಎಂದು ನಾಗಭರಣ ಹೇಳಿದರು.