ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ಚಾಲನೆ

24blrp2
Published on

ಬಿ.ಎಲ್.ಲಕ್ಷ್ಮಣ್ ಬೇಲೂರು
ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಪೈಕಿ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ಶುಕ್ರವಾರ ಚಾಲನೆ ದೊರೆಯಿತು.

ಬೇಲೂರು, ಆಲೂರು ಹಾಗೂ ಸಕಲೇಶಪುರ ಭಾಗದಲ್ಲಿ ಬೀಡು ಬಿಟ್ಟಿರುವ 60ಕ್ಕೂ ಹೆಚ್ಚು ಆನೆಗಳ ಪೈಕಿ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗಾಗಿ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ 6 ಸಾಕಾನೆಗಳನ್ನು ಕೊಡಗಿನ ದುಬಾರೆ, ನಾಗರಹೊಳೆ ವಲಯದ ಮತ್ತಿಗೋಡು ಶಿಬಿರದಿಂದ ಕರೆತರಲಾಗಿದೆ. ಅರ್ಜುನ, ಭೀಮ, ಭೀಷ್ಮ, ಗೋಪಾಲಸ್ವಾಮಿ, ಪ್ರಶಾಂತ್, ಧನಂಜಯ್ ಹೆಸರಿನ ಸಾಕಾನೆಗಳ ನೆರವಿನೊಂದಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಡಿ.15ರವರೆಗೆ ನಡೆಯಲಿದೆ.

ಕಾರಣವೇನು? ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿ ಸೇರಿದಂತೆ ಆಲೂರು ಹಾಗೂ ಸಕಲೇಶಪುರ ಭಾಗದಲ್ಲಿ 60ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ನಾಗರಿಕರ ಪ್ರಾಣಹಾನಿಯೂ ಸಂಭವಿಸಿದೆ. ಜತೆಗೆ ಕಾಡಾನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆನೆಗಳ ಹಾವಳಿಯಿಂದ ಬೆಳೆಗಾರರು, ರೈತರು, ಕೂಲಿಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರೋಸಿಹೋಗಿದ್ದಾರೆ. ಕಾಫಿ ಬೆಳೆಗಾರರು ಬೆಳೆ ನಷ್ಟ ಅನುಭವಿಸಿದರೆ, ಕೂಲಿಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಆನೆಗಳು ಹಗಲು- ರಾತ್ರಿ ಎನ್ನದೆ ತೋಟ ಹಾಗೂ ಜಮೀನುಗಳಲ್ಲಿ ಬೀಡು ಬಿಡುವುದರ ಜತೆಗೆ ಜನವಸತಿ ಪ್ರದೇಶಕ್ಕೆ ನುಗ್ಗಿ ಆತಂಕ ಸೃಷ್ಟಿಸುತ್ತಿವೆ. ಜನರು ಕಾಣುತ್ತಿದ್ದಂತೆ ಅಟ್ಟಾಡಿಸಿಕೊಂಡು ಬರುತ್ತಿವೆ. ಪರಿಣಾಮ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಾಡಂಚಿನ ಗ್ರಾಮಗಳ ಜನರು ಮನೆಯಿಂದ ಹೊರಬರಲು ಯೋಚಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಕಾಡಾನೆಗಳನ್ನು ಇಲ್ಲಿಂದ ಶಾಶ್ವತವಾಗಿ ಓಡಿಸಿ ನೆಮ್ಮದಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು. ಇಲ್ಲವೇ ನಮ್ಮ ತೋಟ, ಜಮೀನುಗಳನ್ನು ಕಾಡಾನೆಗಳ ವಾಸಕ್ಕಾಗಿ ವಶಕ್ಕೆ ಪಡೆದು ತಮಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಬೆಳೆಗಾರರು ಸಾಕಷ್ಟು ಬಾರಿ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದರು. ಹೀಗಾಗಿ ಕಾಡಾನೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಹಾಸನದ ಅರಣ್ಯ ಭವನದಲ್ಲಿ ನಡೆದಿತ್ತು. ಈ ವೇಳೆ ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಪ್ರತ್ಯೇಕ ಗುಂಪುಗಳಲ್ಲಿರುವ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಅನುಮತಿ ದೊರೆತಿತ್ತು. ಅದರಂತೆ, ಶುಕ್ರವಾರ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.

ಪ್ರಯೋಜನ
ಕಾಡಾನೆಗಳ ಟ್ರ್ಯಾಕಿಂಗ್‌ಗೆ ರೇಡಿಯೋ ಕಾಲರ್ ವ್ಯವಸ್ಥೆ ಸಹಕಾರಿಯಾಗಿದೆ. ಪುಂಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ಇದು ಸಹಾಯ ಮಾಡುತ್ತದೆ. ಆನೆಗಳ ಹಿಂಡು ಯಾವ ದಿಕ್ಕಿನತ್ತ ಸಂಚರಿಸುತ್ತಿದೆ, ಯಾವ ಪ್ರದೇಶದಲ್ಲಿವೆ ಎಂಬುದನ್ನು ತಿಳಿದು ಆ ಪ್ರದೇಶದ ಜನರಿಗೆ ಮಾಹಿತಿ ಜತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.

ಮೊದಲ ದಿನವೇ ಯಶಸ್ವಿ
ಶುಕ್ರವಾರ ಬೆಳಗ್ಗೆ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಕಾರ್ಯಾಚರಣೆ ಪ್ರಾರಂಭಿಸಿದ ಮೊದಲ ದಿನವೇ 6 ಸಾಕಾನೆಗಳ ಸಹಾಯದಿಂದ ಒಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಯಿತು. ಶನಿವಾರದಿಂದ ಇನ್ನುಳಿದ ಆನೆಗಳ ಗುಂಪನ್ನು ಗುರುತಿಸಿ ಅವುಗಳಲ್ಲಿ ಪ್ರಮುಖವಾಗಿ ನೇತೃತ್ವ ವಹಿಸುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಹಾಸನ ಡಿಎಫ್‌ಒ ಡಿ.ಮೋಹನ್ ಕುಮಾರ್, ಹಾಸನ ಎಸಿಎಫ್ ಪ್ರಭು ಬೀರದಾರ್, ಸಕಲೇಶಪುರ ಮಹದೇವ್, ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಸಕಲೇಶಪುರ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ರಘು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಬೇಲೂರು ತಾಲೂಕಿನಲ್ಲಿ ಕಾಡಾನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಬೆಳೆಗಳಿಗೆ ಸಾಕಷ್ಟು ಹಾನಿಯಾಗುತ್ತಿದೆ. ರೈತರು ಹಾಗೂ ನಾಗರಿಕರ ಜೀವಹಾನಿ ಮಾಡುತ್ತಿವೆ. ಕಾಡಾನೆಗಳಿಗೆ ಕೇವಲ ರೇಡಿಯೋ ಕಾಲರ್ ಅಳವಡಿಸಿದರೆ ಬರೀ ಮಾಹಿತಿ ಸಿಗುತ್ತದೆಯೇ ಹೊರತು ತಕ್ಷಣವೇ ಬಂದು ಹಾನಿ ಮಾಡಿದರೆ ಯಾರಿಗೂ ತಿಳಿಯುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ. ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಮೂಲಕ ತಾಲೂಕಿನ ಮಲೆನಾಡು ಭಾಗದ ಬೆಳೆಗಾರರು, ರೈತರು, ಕೂಲಿಕಾರ್ಮಿಕರು ಜೀವ ಭಯವಿಲ್ಲದೆ ನೆಮ್ಮದಿಯಿಂದ ಬದುಕುವಂತಾಗಬೇಕು. ಹೀಗಾಗಿ ಅಧಿಕಾರಿಗಳು ಸೂಕ್ರ ಕ್ರಮಕ್ಕೆ ಮುಂದಾಗಬೇಕು.
ಎಚ್.ಕೆ.ಸುರೇಶ್, ಶಾಸಕ, ಬೇಲೂರು

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದರೂ ಆನೆಗಳ ಹಿಂಡಿನಿಂದ ಬೆಳೆ ಹಾನಿ ತಪ್ಪಿಸಲು ಸಾಧ್ಯವಿಲ್ಲ. ಅವುಗಳನ್ನು ಶಾಶ್ವತವಾಗಿ ಕಾಡಿಗಟ್ಟಿದರೆ ಮಾತ್ರ ಬೆಳೆಗಾರರು, ರೈತರು ಹಾಗೂ ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಸಾಧ್ಯ. ಈ ಭಾಗದಲ್ಲಿ ಬೀಡು ಬಿಟ್ಟಿರುವ ದೊಡ್ಡ ಆನೆಗಳ ಜತೆಗೆ ಮರಿಯಾನೆಗಳಿಂದಲೇ ಹೆಚ್ಚು ಹಾನಿಯಾಗುತ್ತಿರುವುದರಿಂದ ಅವುಗಳನ್ನು ಶೀಘ್ರವಾಗಿ ಹಿಡಿದು ದೂರದ ಕಾಡಿಗೆ ಬಿಟ್ಟರೆ ಮಾತ್ರ ಇಂತಹ ಕಾರ್ಯಾಚರಣೆಗೆ ಅರ್ಥ ಬರುತ್ತದೆ. ಸರ್ಕಾರ ಮತ್ತು ಅಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಬೇರೆ ಕಾಡಿಗೆ ಬಿಡುವ ಕೆಲಸ ಮಾಡಬೇಕು.
ಅದ್ದೂರಿ ಕುಮಾರ್, ಅಧ್ಯಕ್ಷ, ತಾಲೂಕು ಕಾಫಿ ಬೆಳೆಗಾರರ ಸಂಘ, ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net